ಮಂಗಳೂರು ಹಂಪನ್ ಕಟ್ಟೆಯಲ್ಲಿರುವ ವೈಟ್ ಸ್ಟೋನ್ ಪ್ರೀಮಿಯರ್ ಇನ್ ಸಭಾಂಗಣದಲ್ಲಿ ಗುರುವಾರ ನಡೆದ ಸನ್ಮಾನ ಕಾರ್ಯಕ್ರಮ ಮನಸ್ಪರ್ಶಿಯಾಗಿತ್ತು. ವೈಟ್ ಸ್ಟೋನ್ ಶರೀಫ್ ಹಾಜಿ ಎಂಬ ಮೇರು ಮಟ್ಟದ ವ್ಯಕ್ತಿತ್ವವನ್ನು ಮಂಗಳೂರು ಗೆಳೆಯರ ಬಳಗ ಗೌರವಿಸಿ ಸನ್ಮಾನಿಸಿದ ಕಾರ್ಯಕ್ರಮ.
ಅದೆಷ್ಟೋ ಸನ್ಮಾನ ಸಭೆಗಳಲ್ಲಿ ಭಾಗವಹಿಸಿದ್ದೇನೆ. ಸ್ವತಃ ನನಗೇ ಹಲವು ಕಡೆಗಳಲ್ಲಿ ಸನ್ಮಾನ ನಡೆದಿದೆ. ಆದರೆ ನಿನ್ನೆಯ ಈ ಸನ್ಮಾನ ಕಾರ್ಯಕ್ರಮದಲ್ಲಿ ಕಂಡಂತಹ ಆತ್ಮೀಯತೆ ನಾನೆಲ್ಲೂ ಕಾಣಲಿಲ್ಲ. ಮಾತನಾಡಿದ ಅತಿಥಿಗಳೆಲ್ಲರೂ ಆಡಿದ ಮಾತುಗಳು ಬರೀ ಔಪಚಾರಿಕವಾಗಿರಲಿಲ್ಲ. ಮನದೊಳಗಿಂದ ಬಂದ ರಿಯಲಿ ಮಾತುಗಳಾಗಿದ್ದವು, ನಾವು ಎಷ್ಟೇ ಶ್ಲಾಘಿಸಿದರೂ ಆ ಶ್ಲಾಘನೆಯು ವೈಟ್ ಸ್ಟೋನ್ ಶರೀಫ್ ಹಾಜಿಯವರ ಉನ್ನತ ಮಟ್ಟಕ್ಕೆ ಹೋಲಿಸಿದರೆ ಕಡಿಮೆಯೇ ಸರಿ ಎಂಬ ಭಾವ ಎಲ್ಲರಲ್ಲೂ ಇತ್ತು. ನಿಜಕ್ಕೂ ಇದು ಶರೀಫ್ ಹಾಜಿಯವರ ವಿಷಯದಲ್ಲಿ ಸತ್ಯ ಎಂಬುದು ನೂರಕ್ಕೆ ನೂರು ತಥ್ಯ.
ಮಾತಾಡಿದ ಎಲ್ಲರಲ್ಲೂ ಶರೀಫ್ ಹಾಜಿ ಆವರಿಸಿದ್ದರು. ಸಭಾ ಕಾರ್ಯಕ್ರಮ ಮುಗಿದಾಗ ಶರೀಫ್ ಹಾಜಿಯವರ ದೈತ್ಯಾಕಾರ ಅನಾವರಣಗೊಳ್ಳುತ್ತಾ ಬಂದಿತ್ತು. ಅವರ ಸಾಧನೆಗಳು, ಕೊಡುಗೆಗಳು, ಸಮಾಜ ಸೇವೆಗಳು ಪಬ್ಲಿಕ್ ಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದ್ದು ಹೆಚ್ಚು ಇವೆ ಎಂಬ ಒಂದು ಸತ್ಯ ನಿನ್ನೆಯ ಅತಿಥಿಗಳ ಭಾಷಣಗಳಿಂದ ಅನಾವರಣಗೊಂಡಿತ್ತು. ಉದಾಹರಣೆಗೆ ಬ್ಯಾರಿ ಮಿತ್ರ ಪತ್ರಿಕೆಯ ಸಂಪಾದಕರಾದ ಹಂಝ ಬಡ್ಡೂರು ಅವರು ನನ್ನಲ್ಲಿ ಹೇಳಿದ್ದ ಒಂದು ಅನುಭವವನ್ನು ನಿನ್ನೆ ಸಭೆಯಲ್ಲಿ ನಾನು ಹಂಚಿಕೊಂಡೆನು. ಶರೀಫ್ ಹಾಜಿಯವರು ಓರ್ವ ಬಡ ಮಹಿಳೆಗೆ ಹೊಲಿಗೆ ಯಂತ್ರ ಕೊಡಿಸಿದಾಗ ಫೋಟೋ ತೆಗೆದು ಪಬ್ಲಿಶ್ ಮಾಡುವುದನ್ನು ಶರೀಫ್ ಹಾಜಿ ನಿರಾಕರಿಸಿದರು. ಆ ಮಹಿಳೆಗೆ ಅದು ಅವಮಾನ, ಅವರು ಹೊಲಿದು ಜೀವನ ಸಾಗಿಸಲಿ, ಆಕೆಯ ಉದ್ಯೋಗಕ್ಕೆ ಪ್ರೋತ್ಸಾಹ ಕೊಡಿ ಎಂದರಂತೆ ಶರೀಫ್ ಹಾಜಿಯವರು. ಇದನ್ನು ನಾನು ಹೇಳಿದಾಗ ಸಭಿಕರ ಮುಖದಲ್ಲಿ ಭಾವ ಪರವಶತೆಯನ್ನು ಕಂಡೆನು.
ದಾನಕ್ಕಾಗಿ ಮಾತ್ರ ದಾನ, ಹೆಸರಿಗಾಗಿ ಅಲ್ಲ ಎಂಬ ಶರೀಫ್ ಹಾಜಿಯವರ ಸಾವಿರಾರು ಕೊಡುಗೆಗಳ ಉದಾಹರಣೆಗಳು ಧಾರಾಳ. ಒಬ್ಬೊಬ್ಬರಿಗೆ ಹತ್ತಾರು ಇಂತಹ ಅನುಭವಗಳು. ಪಬ್ಲಿಷಿಟಿ ಬಯಸದ ಶರೀಫ್ ಹಾಜಿಯವರ ಅಕಳಂಕ ದಾನ ಧರ್ಮಗಳ ಬಗ್ಗೆ ಹೇಳುವಾಗ ಅಲ್ಲಿ ನಾಟಕೀಯತೆ, ಏನಾದರೊಂದು ಹೇಳಬೇಕಲ್ಲ ಎಂಬ ಭಾವನೆಯಿಂದ ಹೇಳಿಕೆ ಯಾವುದೂ ಇರಲಿಲ್ಲ.
ವೈಟ್ ಸ್ಟೋನ್ ಶರೀಫ್ ಹಾಜಿಯವರ ನಿಸ್ವಾರ್ಥ ದಾನಕ್ಕೆ ಇನ್ನೊಂದು ಉದಾಹರಣೆಯನ್ನು ಆಝಾದ್ ಮನ್ಸೂರ್ ಹಾಜಿಯವರು ತನ್ನ ಭಾಷಣದಲ್ಲಿ ಹೇಳಿದರು. ಮೂವತ್ತು ವರ್ಷ ದಾಟಿದ ಬಡ ಹೆಣ್ಮಕ್ಕಳ ವಿವಾಹ ಯೋಜನೆಯಾದ " ನಂಡೆ ಪೆಂಙಳ್" ಆಯೋಜಿಸಿದ್ದ ಮದುವೆಯ ವಿಷಯದಲ್ಲಿ ಶರೀಫ್ ಹಾಜಿಯವರನ್ನು ಸಮೀಪಿಸಿದಾಗ ಅವರು ನೀಡಿದ್ದ ಸಹಾಯಧನ ನಾವು ನಿರೀಕ್ಷಿಸಿದ್ದಕ್ಕಿಂತಲೂ ಎಷ್ಟೋ ಪಟ್ಟು ದೊಡ್ಡದಾಗಿತ್ತು ಎಂದರು. ಇದೇ ಪ್ರಕಾರ ಸಮಾಜ ಸೇವೆಗೆ ಸಂಬಂಧಪಟ್ಟ ಯಾವುದೇ ಕಾರ್ಯಗಳಿಗೆ ನಾನು ಅಪೇಕ್ಷಿಸಿದಾಗ ಇಲ್ಲ ಎಂಬ ಮಾತು ಅವರಿಂದ ಬಂದೇ ಇಲ್ಲ, ಎಲ್ಲದಕ್ಕೂ ಸೂಕ್ತವಾಗಿ ಸ್ಪಂದಿಸಿದ್ದರು ಎಂಬುದನ್ನೂ ಮನ್ಸೂರ್ ಹಾಜಿ ನೆನಪಿಸಿಕೊಂಡರು. ಇದೇ ನಂಡೆ ಪೆಙಳ್ ಯೋಜನೆಯಲ್ಲಿ ದುಡಿದ ಪ್ರಖ್ಯಾತ ಮೋಟಿವೇಟರ್ ರಫೀಕ್ ಮಾಸ್ಟರ್ ರವರು ಕೂಡಾ ತಮ್ಮ ಸೇವಾಯಾತ್ರೆಯಲ್ಲಿ ವೈಟ್ ಸ್ಟೋನ್ ಶರೀಫ್ ಹಾಜಿಯವರ ಅದಮ್ಯ ಸಹಕಾರವನ್ನು ಸ್ಮರಿಸಿದರು.
ವಿಧಾನಪರಿಷತ್ ಸದಸ್ಯ ಐವನ್ ಡಿ, ಸೋಜಾ, ದ.ಕ. ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ರವೀಂದ್ರ ಶೆಟ್ಟಿ ಉಳಿದೊಟ್ಟು, ದೈಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಹರ್ಷದ್ ಕಂದಕ್, ಉದ್ಯಮಿ ಸಿ.ಆರ್ ಅಬೂಬಕರ್ ಮುಂತಾದ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಈ ಸಮಾರಂಭಕ್ಕೆ ತಮ್ಮ ಉಪಸ್ಥಿತಿಯಿಂದ ಮೆರೆಗು ಕೊಟ್ಟರಲ್ಲದೆ ಶರೀಫ್ ಹಾಜಿಯವರ ವಿಷಯದಲ್ಲಿ ತಮ್ಮ ಮನದಾಳದ ಮಾತುಗಳನ್ನು ಆಡಿದರು. ಎಲ್ಲರ ಮಾತುಗಳ ಮುಖ್ಯಾಂಶಗಳು ಶರೀಫ್ ಹಾಜಿಯವರ ಪ್ರಚಾರ ಬಯಸದ ನಿಷ್ಕಾಮ ಕೊಡುಗೆ, ಸೇವೆಗಳ ಬಗ್ಗೆಯಾಗಿತ್ತು. ವೈಟ್ ಸ್ಟೋನ್ ( ಬಿಳಿಕಲ್ಲು) ಎಂಬುದಕ್ಕೆ ಅನ್ವರ್ಥವಾಗಿ ರೂಪದಲ್ಲೂ ಭಾವದಲ್ಲೂ ಅಂತರಾಳದಲ್ಲೂ ಉಡುಗೆಯಲ್ಲೂ ನಡವಳಿಕೆಯಲ್ಲೂ ಶರೀಫ್ ಹಾಜಿಯವರು ವೈಟ್ ಆಗಿದ್ದಾರೆ ಎಂಬ ಕಾವ್ಯಾತ್ಮಕ ಹಾಗೂ ಅರ್ಥಪೂರ್ಣವಾದ ಮಾತು ಕೂಡಾ ಕೇಳಿಬಂತು.
ಕಾರ್ಯಕ್ರಮದ ಆಯೋಜಕರಾದ "ಗೆಳೆಯರ ಬಳಗ" ದ ಅಧ್ಯಕ್ಷ ಡಿ.ಐ. ಅಬೂಬಕರ್ ಕೈರಂಗಳ ಸ್ವಾಗತಿಸಿದರು. ಕಾರ್ಯದರ್ಶಿ ಸಾಜಿದ್ ಉಳ್ಳಾಲ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸಿರಿಲ್ ಡಿ' ಸೋಜಾ ತೊಕ್ಕೋಟು ಇವರು ಅಭಿನಂದನಾ ಪತ್ರವನ್ನು ವಾಚಿಸಿದರು.
ವೈಟ್ ಸ್ಟೋನ್ ಶರೀಫ್ ಹಾಜಿಯವರಿಗೆ ಆರೋಗ್ಯ, ಆಯುಷ್ಯ ವೃದ್ಧಿಯಾಗಲಿ ಹಾಗೂ ಸಾಮಾಜಿಕ, ಶೈಕ್ಷಣಿಕ ಸೇವೆಗಳಲ್ಲಿ ಮುಂದುವರಿಯುವ ಸುಯೋಗ ಇನ್ನೂ ಮುಂದುವರಿಯಲಿ ಎಂಬುದು ನಮ್ಮೆಲ್ಲರ ಹತ್ಕರಣದ ಹಾರೈಕೆ.
-ಡಿ.ಐ. ಅಬೂಬಕರ್ ಕೈರಂಗಳ
