ಉಡುಪಿ: ಉಡುಪಿ ಜಿಲ್ಲೆಯನ್ನು ರಾಜ್ಯ ಸರಕಾರ ನಿರ್ಲಕ್ಷ ಮಾಡುತ್ತಿದೆ ಎಂದು ಆರೋಪಿಸಿ ಇಂದು ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಗೋ ಬ್ಯಾಕ್ ಹೇಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.
ಇವತ್ತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಬೆಳಿಗ್ಗೆ ಉಡುಪಿಯಿಂದ ಮಣಿಪಾಲಕ್ಕೆ ಸಚಿವೆ ಕೆ ಡಿ ಪಿ ಸಭೆಗೆ ಆಗಮಿಸುವಾಗ ಬಿಜೆಪಿ ಯುವ ಮೋರ್ಚಾ ಸದಸ್ಯರು ಗೋ ಬ್ಯಾಕ್ ಲಕ್ಷ್ಮಿ ಹೆಬ್ಬಾಳ್ಕರ್ ಎಂದು ಕೂಗುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿರುವುದರ ಜೊತೆಗೆ ಹೆಬ್ಬಾಳ್ಕರ್ ಅವರು ಅಪರೂಪಕ್ಕೆ ಎಂಬಂತೆ ಜಿಲ್ಲೆಗೆ ಬರುತ್ತಿದ್ದಾರೆ.ಈ ಮೂಲಕ ಜಿಲ್ಲೆಯ ಜನರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ಯುವ ಮೋರ್ಚಾ ಕಾರ್ಯಕರ್ತರ ಆರೋಪವಾಗಿದೆ. ಇದಕ್ಕೂ ಮೊದಲು ಬಿಜೆಪಿ ಯುವ ಮೋರ್ಚಾ ಸಚಿವೆಗೆ ಕಪ್ಪು ಬಾವುಟ ಪ್ರದರ್ಶನ ಮಾಡುವ ಯೋಜನೆ ಹಾಕಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಮಣಿಪಾಲದ ರಜತಾದ್ರಿಯ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಕೊನೆಗಳಿಗೆಯಲ್ಲಿ ಸಚಿವೆಗೆ ಕಪ್ಪು ಬಾವುಟ ಪ್ರದರ್ಶನ ಮಾಡುವ ಬದಲು ಗೋ ಬ್ಯಾಕ್ ಲಕ್ಷ್ಮಿ ಅಕ್ಕ ಎಂದು ಯುವ ಮೋರ್ಚಾ ಸದಸ್ಯರು ಜೋರಾಗಿ ಕೂಗಿದರು.ಈ ವೇಳೆ ಸಚಿವೆ ಕಾರಿನ ಮೂಲಕ ನೇರವಾಗಿ ಕೆ ಡಿ ಪಿ ಸಭೆಗೆ ತೆರಳಿದರು.
