ಉಡುಪಿ: ಸಮಾಜದಲ್ಲಿ ಶಿಕ್ಷಣದ ಮೂಲಕ ಯುವಜನರನ್ನು ಸಬಲೀಕರಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು, ಆ ನಿಟ್ಟಿನಲ್ಲಿ ವಿದ್ಯಾರ್ಥಿವೇತನ ನೀಡುತ್ತಿರುವ ಮಲಬಾರ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯ ಶ್ಲಾಘನೀಯವಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದ್ದಾರೆ.
ಅವರು ಮಂಗಳವಾರ ಉಡುಪಿ ನಗರದ ಅಜ್ಜರಕಾಡು ಟೌನ್ ಹಾಲ್‌ನಲ್ಲಿ ನಡೆದ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಸಂಸ್ಥೆಯ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಂವಿಧಾನದ ಅಡಿಯಲ್ಲಿ ನಾವು ಬೆಳೆದಿದ್ದೇವೆ. ಈ ದೇಶಕ್ಕಾಗಿ ಅನೇಕ ಮಹನೀಯರು ತ್ಯಾಗ ಮತ್ತು ಬಲಿದಾನ ನೀಡಿದ್ದಾರೆ. ಆ ಹೋರಾಟದ ಫಲವಾಗಿ ನಮಗೆ ಸಿಕ್ಕಿರುವ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ಹೇಳಿದರು.
ದೇಶದ ಯುವಜನತೆ ಸಮಾಜ ನಿರ್ಮಾಣದ ಪ್ರಮುಖ ಶಕ್ತಿಯಾಗಿದ್ದು, ಯುವಕರು ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಣವೇ ಅದಕ್ಕೆ ಬಲವಾದ ಅಸ್ತ್ರವಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗುವ ವಿದ್ಯಾರ್ಥಿವೇತನ ಯೋಜನೆಗಳು ಸಮಾಜದಲ್ಲಿ ಆಶಾಕಿರಣ ಮೂಡಿಸುತ್ತವೆ ಎಂದರು.
ಈ ದೇಶದಲ್ಲಿರುವ ಯುವಕರನ್ನು ಸಬಲೀಕರಣ ಮಾಡಬೇಕಾದರೆ ಮಲಬಾರ್ ಚಾರಿಟೇಬಲ್ ಟ್ರಸ್ಟ್‌ನಂತಹ ಸಂಸ್ಥೆಗಳು ವಿದ್ಯಾರ್ಥಿವೇತನದಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸಬೇಕು” ಎಂದು ಹೇಳಿದರು.
ಚಿನ್ನದ ಮಹತ್ವದ ಕುರಿತು ಮಾತನಾಡಿದ ಅವರು, “ಚಿನ್ನವನ್ನು ಖರೀದಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರೂ, ನಾವು ಚಿನ್ನವನ್ನು ಹೆಚ್ಚು ಹೆಚ್ಚು ಖರೀದಿಸಬೇಕು. ಆಪತ್ತಿನ ಸಮಯದಲ್ಲಿ ಅದೇ ನಮ್ಮ ನೆರವಿಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ 75 ಕಾಲೇಜುಗಳ 518 ವಿದ್ಯಾರ್ಥಿನಿಯರಿಗೆ ಒಟ್ಟು 42 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶಿಕ್ಷಕ ಹಾಗೂ ಬರಹಗಾರ ಅಶ್ವಿನ್ ದಾಂತೆ, ವಕೀಲೆ ಸಹನ ಕುಂದರ್, ಸಾಮಾಜಿಕ ಕಾರ್ಯಕರ್ತ ನವೀನ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿನಿಯರು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
