ಉಡುಪಿ: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಹದಿನಾರನೇ ಕನ್ನಡ ಸಾಹಿತ್ಯ ಸಮ್ಮೇಳನ 'ಬೀಷ್ಮೋತ್ಸವ' ಸಾಹಿತ್ಯ -ಸಂಸ್ಕೃತಿ -ಕಲೋತ್ಸವವು ಇದೇ ಮೇ 3ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಸಭಾಂಗಣದಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ವೇದಿಕೆಯಲ್ಲಿ ನಡೆಯಲಿದೆ ಎಂದು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್‌ಪಿ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಾ. ಭಾಸ್ಕರಾನಂದ ಕುಮಾರ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವು ಬೆಳಿಗ್ಗೆ 8.30ಕ್ಕೆ ಮೆರವಣಿಗೆಯೊಂದಿಗೆ ಆರಂಭವಾಗಲಿದೆ. ಬೆಳಿಗ್ಗೆ 10 ಗಂಟೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ತಿಲಕನಾಥ್ ಮಂಜೇಶ್ವರ , ಗೋಪಾಲ್ ಭಟ್ ಎಂ, ವಿಮಲಾ ಚಂದ್ರಶೇಖರ್, ಮರವಂತೆ ನಾಗರಾಜ್ ಹೆಬ್ಬಾರ್, ಕೆ ರಂಜನ್ , ಲಕ್ಷ್ಮಿ ಹರಿಶ್ಚಂದ್ರ, ಅ. ರಾ. ಪ್ರಭಾಕರ್ ಪೂಜಾರಿ, ವಿಘ್ನೇಶ್ವರ ಅಡಿಗ, ಪಿ.ಎಂ. ವೇಣು ಗೋಪಾಲ್ ಹೆಬ್ಬಾರ್, ಶ್ರೀಕಾಂತ್ ಭಟ್, ವಿದ್ಯಾಲತಾ ಯು. ಶೆಟ್ಟಿ ಅವರಿಗೆ ಕಸಾಪ ಉಡುಪಿ ತಾಲೂಕು ಗೌರವ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ಬಳಿಕ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಅವರಿಂದ ಗೀತ ಗಾಯನ ನಡೆಯಲಿದೆ. ಉಡುಪಿ ತಾಲೂಕಿನ ಎಸ್ಎಸ್ಎಲ್ ಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ಸುಮಾರು 50 ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಮಧ್ಯಾಹ್ನ 12 ಗಂಟೆಗೆ ಬಹುಮುಖಿ ಕನ್ನಡ ಕವಿ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 1.15 ರಿಂದ ಹೆಜ್ಜೆಗೆಜ್ಜೆ ತಂಡದಿಂದ 'ನೃತ್ಯ ಸಿಂಚನ ' ಕಾರ್ಯಕ್ರಮ, ಸಂಧ್ಯಾ ಶೆಣೈ ಅವರಿಂದ ಹಾಸ್ಯ ಸಮಯ 'ಆಪ್ತಮಿತ್ರರ ಕಚಗುಳಿ ' ನಡೆಯಲಿದೆ. ಮಧ್ಯಾಹ್ನ 3:35ಕ್ಕೆ ಸಮ್ಮೇಳನಾಧ್ಯಕ್ಷರಾದ ಡಾ.ಭಾಸ್ಕರಾನಂದ ಕುಮಾರ್ ಅವರೊಂದಿಗೆ ಮುಖಾಮುಖಿ ನಡೆಯಲಿದ್ದು, ಬನ್ನಂಜೆ ಸಂಜೀವ ಸುವರ್ಣ,ಮುರಳಿ ಕಡೆಕಾರ್ ಉದ್ಯಾವರ ನಾಗೇಶ್, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಭಾಗವಹಿಸಲಿದ್ದಾರೆ.
ಸಂಜೆ 4:30 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಡಾ. ಗಣನಾಥ್ ಶೆಟ್ಟಿ ಎಕ್ಕಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 23 ಮಂದಿ ಗಣ್ಯರನ್ನು ಮತ್ತು 5 ಸಂಘ ಸಂಸ್ಥೆಗಳನ್ನು ಗುರುತಿಸಿ ಗೌರವಿಸಲಾಗುವುದು. ಸಂಜೆ 6 ಗಂಟೆಗೆ ಸರಿಯಾಗಿ ರಾಜೇಶ್ ಭಟ್ ಪಣಿಯಾಡಿ ಅವರ ನಿರ್ದೇಶನದ 'ಕತ್ತಲೆ ರಾಜ್ಯದ ಮರ್ಕಟ ರಾಜ ' ಎಂಬ ಮಕ್ಕಳ ನಾಟಕ ಪ್ರದರ್ಶನಕೊಳ್ಳಲಿದೆ ಎಂದರು.
ಕಸಾಪ ಉಡುಪಿ ತಾಲೂಕು ಗೌರವ ಸಲಹೆಗಾರರಾದ ವಿಶ್ವನಾಥ್ ಶೆಣೈ, ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಸ್ವಾಗತ ಸಮಿತಿ ಕಾರ್ಯದರ್ಶಿ ಸತೀಶ್ ಕೊಡವೂರು, ಕಾನೂನು ಸಲಹೆಗಾರ ವಿನಯ್ ಆಚಾರ್ಯ ಮುಂಡ್ಕೂರು ಉಪಸ್ಥಿತರಿದ್ದರು.
