ರಿಯಾದ್(ಸೌದಿ ಅರೇಬಿಯಾ): ಕರ್ನಾಟಕ ಅನಿವಾಸಿ ಕನ್ನಡಿಗರಿಗಾಗಿ(NRKs) ಪ್ರತ್ಯೇಕ ಸಚಿವಾಲಯ ಸ್ಥಾಪನೆ ಹಾಗೂ ಸೂಕ್ತ ಸಚಿವರ ನೇಮಕಾತಿ ಮಾಡುವಂತೆ ಸೌದಿ ಅರೇಬಿಯಾದ ರಿಯಾದ್ ನ ಕರ್ನಾಟಕ ಅನಿವಾಸಿ ಒಕ್ಕೂಟ ಒತ್ತಾಯಿಸಿದೆ.
ನಿಯೋಜಿತ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಈ ಬಗ್ಗೆ ಒತ್ತಾಯಿಸಿರುವ ಕರ್ನಾಟಕ ಅನಿವಾಸಿ ಒಕ್ಕೂಟ, ಗಲ್ಫ್ ರಾಷ್ಟ್ರಗಳು ಸೇರಿದಂತೆ ವಿವಿಧ ದೇಶಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಅನಿವಾಸಿ ಕನ್ನಡಿಗರ (NRKs) ಪರವಾಗಿ, ಕರ್ನಾಟಕ ಅನಿವಾಸಿ ಒಕ್ಕೂಟ (Karnataka Non-Residents Forum, Riyadh-KSA) ವತಿಯಿಂದ, ಕರ್ನಾಟಕದ ಮುಖ್ಯಮಂತ್ರಿಯಾಗಿ ಅತಿಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿರುವ ನಿಮಗೆ ಮುಂಚಿತವಾಗಿ ಹಾರ್ದಿಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳನ್ನು ಸಲ್ಲಿಸಿದೆ.
ನಿಮ್ಮ ನಾಯಕತ್ವದಲ್ಲಿ ಕರ್ನಾಟಕವು ಸಮಗ್ರ ಅಭಿವೃದ್ಧಿ, ಜನಪರ ಆಡಳಿತ ಹಾಗೂ ವಿಶ್ವದಾದ್ಯಂತ ಇರುವ ಕನ್ನಡಿಗರೊಂದಿಗೆ ಇನ್ನಷ್ಟು ಬಲವಾದ ಬಾಂಧವ್ಯವನ್ನು ಹೊಂದಲಿದೆ ಎಂಬ ವಿಶ್ವಾಸ ನಮಗಿದೆ.
ಸೌದಿ ಅರೇಬಿಯಾ, ಯುಎಇ, ಕುವೈತ್, ಕತಾರ್, ಒಮನ್, ಬಹರೈನ್ ಸೇರಿದಂತೆ ಹಾಗೂ ಇತರ ದೇಶಗಳಲ್ಲಿ ನೆಲೆಸಿರುವ ಲಕ್ಷಾಂತರ ಕನ್ನಡಿಗರು ಹಲವು ದಶಕಗಳಿಂದ ಹಣಕಾಸು ಕಳುಹಿಸುವಿಕೆ, ಹೂಡಿಕೆ, ಸಮಾಜಸೇವೆ ಹಾಗೂ ವಿವಿಧ ಮಾನವೀಯ ಚಟುವಟಿಕೆಗಳ ಮೂಲಕ ಕರ್ನಾಟಕದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಈ ಅನಿವಾಸಿ ಕನ್ನಡಿಗರು ತಮ್ಮ ಕುಟುಂಬಗಳನ್ನು ಮಾತ್ರವಲ್ಲದೆ ರಾಜ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೂ ಪ್ರಮುಖ ಆಧಾರವಾಗಿದ್ದಾರೆ.
ಆದರೆ, ಇವರ ಅಪಾರ ಕೊಡುಗೆಗಳ ನಡುವೆಯೂ ಅನಿವಾಸಿ ಕನ್ನಡಿಗರು ಹಲವಾರು ಗಂಭೀರ ಸಮಸ್ಯೆಗಳು ಹಾಗೂ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು:
೧) ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಕೇರಳಂ NORKA ಮಾದರಿಯ ಪ್ರತ್ಯೇಕ ಸಚಿವಾಲಯ ಮತ್ತು ಇಲಾಖೆ/ಮಂಡಳಿಯ ಕೊರತೆ.
೨) ಉದ್ಯೋಗ ಕಳೆದುಕೊಂಡು ಅಥವಾ ಇತರೇ ಕಾರಣಗಳಿಂದ ಅಥವಾ ನಿವೃತ್ತರಾಗಿ ಮರಳುವ ಗಲ್ಫ್ ವಲಸಿಗರ ಪುನರ್ವಸತಿ, ಪಿಂಚಣಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಅಭಾವ.
೩) ವಿದೇಶಗಳಲ್ಲಿ ಅಪಘಾತಕ್ಕೊಳಗಾಗುವ, ಮೃತಪಡುವ ಅಥವಾ ಜೈಲು ಶಿಕ್ಷೆಗೆ ಒಳಗಾಗುವ ವಲಸಿಗರ ಕುಟುಂಬಗಳು ಎದುರಿಸುವ ಆರ್ಥಿಕ ಸಂಕಷ್ಟಗಳು ಮತ್ತು ಅವರಿಗೆ ವಿಶೇಷ ನೆರವು ನಿಧಿಯ ಕೊರತೆ.
೪) ವಲಸಿಗರು ಹಾಗೂ ಅವರ ಕುಟುಂಬಗಳಿಗೆ ಸಮರ್ಪಕ ವೈದ್ಯಕೀಯ ಮತ್ತು ವಿಮಾ ಸೌಲಭ್ಯಗಳು ಇಲ್ಲದಿರುವುದು.
೫) ಅನಿವಾಸಿ ಕನ್ನಡಿಗರ ಮಕ್ಕಳಿಗೆ ಶಿಕ್ಷಣ, ವಿದ್ಯಾರ್ಥಿವೇತನ ಹಾಗೂ ಶುಲ್ಕ ಸೌಲಭ್ಯಗಳಲ್ಲಿ ಎದುರಾಗುವ ತೊಂದರೆಗಳು.
೬) ಕಾರ್ಮಿಕ ಸಮಸ್ಯೆಗಳು ಹಾಗೂ ಕಾನೂನು ಸಂಬಂಧಿತ ಪ್ರಕರಣಗಳಲ್ಲಿ ಸಮರ್ಪಕ ಕಾನೂನು ನೆರವು ಮತ್ತು ದೂರು ಪರಿಹಾರ ವ್ಯವಸ್ಥೆಗಳ ಕೊರತೆ.
೭) ಕರ್ನಾಟಕದಲ್ಲಿ ಹೂಡಿಕೆ ಮಾಡಲು ಬಯಸುವ ಅನಿವಾಸಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ವ್ಯವಸ್ಥೆಗಳ ಅಭಾವ.
೮) ಯುದ್ಧ, ಸಾಂಕ್ರಾಮಿಕ ರೋಗಗಳು ಅಥವಾ ತುರ್ತು ಪರಿಸ್ಥಿತಿಗಳ ಸಂದರ್ಭಗಳಲ್ಲಿ ಸಮರ್ಪಕ ನೆರವು ವ್ಯವಸ್ಥೆಗಳ ಕೊರತೆ.
೯) ಮರಳುವ ವಲಸಿಗರಿಗಾಗಿ ಕೌಶಲ್ಯಾಭಿವೃದ್ಧಿ, ಸಮಾಲೋಚನೆ ಹಾಗೂ ಪುನರ್‌ಒಗ್ಗೂಡಿಕೆ ಕಾರ್ಯಕ್ರಮಗಳ ಅಭಾವ.
೧೦) ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಅನಿವಾಸಿ ಕನ್ನಡಿಗರ ಕಲ್ಯಾಣ ಮಂಡಳಿಗಳ ಕೊರತೆ.
೧೧) ಕೆಲವು ಗಲ್ಫ್ ರಾಷ್ಟ್ರಗಳಾದ ಸೌದಿಅರೇಬಿಯಾ ರಾಜಧಾನಿ ರಿಯಾದ್ ನಿಂದ ಮಂಗಳೂರು ಮತ್ತು ಬೆಂಗಳೂರಿಗೆ ನೇರ ವಿಮಾನಯಾನ ಇಲ್ಲದಿರುವುದು.
೧೨) 24x7 ಸಹಾಯವಾಣಿ ಹಾಗೂ ದೂರು ಪರಿಹಾರ ಕೇಂದ್ರಗಳ ವ್ಯವಸ್ಥೆ ಇಲ್ಲದಿರುವುದು.
ಈ ಹಿನ್ನೆಲೆಯಲ್ಲಿ, ಅನಿವಾಸಿ ಕನ್ನಡಿಗರ ಹಿತಾಸಕ್ತಿಗಳನ್ನು ಸಮಗ್ರವಾಗಿ ರಕ್ಷಿಸಲು ಹಾಗೂ ಅವರ ಕಲ್ಯಾಣಕ್ಕಾಗಿ ಸ್ವತಂತ್ರ ಬಜೆಟ್, ಆಡಳಿತಾತ್ಮಕ ವ್ಯವಸ್ಥೆ ಮತ್ತು ಕಲ್ಯಾಣ ಯೋಜನೆಗಳನ್ನು ಹೊಂದಿರುವ “ಕರ್ನಾಟಕ ಅನಿವಾಸಿ ಕನ್ನಡಿಗರ ಸಚಿವಾಲಯ” ವನ್ನು ತಮ್ಮ ನಾಯಕತ್ವದಲ್ಲಿ ಸ್ಥಾಪಿಸಬೇಕೆಂದು ನಾವು ವಿನಮ್ರವಾಗಿ ಮನವಿ ಮಾಡುತ್ತೇವೆ.
ಇದೇ ವೇಳೆ, ಅನಿವಾಸಿ ಕನ್ನಡಿಗರ ಕಲ್ಯಾಣ ಕ್ಷೇತ್ರದಲ್ಲಿ ದೀರ್ಘ ಅನುಭವ ಹಾಗೂ ಅಪಾರ ತೊಡಗಿಸಿಕೊಂಡಿರುವ ಮಾನ್ಯ ವಿಧಾನ ಪರಿಷತ್ ಸದಸ್ಯೆ ಹಾಗೂ ಕರ್ನಾಟಕ ಅನಿವಾಸಿ ಕಾರ್ಯಕ್ರಮಗಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡಿರುವ ಡಾ. ಆರತಿ ಕೃಷ್ಣ ರವರನ್ನು ಈ ಸಚಿವಾಲಯದ ಮಂತ್ರಿಯಾಗಿ ನೇಮಿಸುವಂತೆ ಸಹ ವಿನಂತಿಸುತ್ತೇವೆ.
ಪ್ರಸ್ತಾವಿತ ಸಚಿವಾಲಯ ಹಾಗೂ ಮಂಡಳಿಯ ಮೂಲಕ ಮೇಲಿನ ಕೊರತೆಗಳನ್ನು ನೀಗಿಸಿ, ಅವುಗಳನ್ನು ಪ್ರಮುಖ ಯೋಜನೆಗಳನ್ನಾಗಿ ರೂಪೀಕರಿಸಿ, ಸ್ವತಂತ್ರ ಬಜೆಟ್ ಮೂಲಕ ಜಾರಿಗೊಳಿಸುವಂತೆ ಕೋರುತ್ತೇವೆ.
ಕರ್ನಾಟಕವು ದೇಶದಲ್ಲೇ ಅತ್ಯಧಿಕ ವಿದೇಶಿ ವಲಸಿಗರನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಪ್ರತ್ಯೇಕ ಸಚಿವಾಲಯದ ಸ್ಥಾಪನೆ ಅನಿವಾಸಿ ಕನ್ನಡಿಗರ ವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಹೂಡಿಕೆ, ಉದ್ಯೋಗಾವಕಾಶಗಳು ಹಾಗೂ ಕರ್ನಾಟಕದ ಜಾಗತಿಕ ಪ್ರತಿಷ್ಠೆಯನ್ನೂ ಮತ್ತಷ್ಟು ವೃದ್ಧಿಸಲಿದೆ.
ಅನಿವಾಸಿ ಕನ್ನಡಿಗರ ತ್ಯಾಗ, ಪರಿಶ್ರಮ ಹಾಗೂ ಕೊಡುಗೆಗಳನ್ನು ಗೌರವಿಸಿ ಅವರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವ ಐತಿಹಾಸಿಕ ನಿರ್ಧಾರವನ್ನು ನಿಮ್ಮ ಸರ್ಕಾರ ಕೈಗೊಳ್ಳುತ್ತದೆ ಎಂಬ ವಿಶ್ವಾಸ ನಮಗಿದೆ.
ನಿಮ್ಮ ಸಕಾರಾತ್ಮಕ ಸ್ಪಂದನೆಗಾಗಿ ಎದುರುನೋಡುತ್ತಿದ್ದು, ಕರ್ನಾಟಕ ಹಾಗೂ ಜಾಗತಿಕ ಕನ್ನಡಿಗ ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಸಂಪೂರ್ಣ ಸಹಕಾರವನ್ನು ಭರವಸೆ ನೀಡುತ್ತೇವೆ ಎಂದು ಕರ್ನಾಟಕ ಅನಿವಾಸಿ ಒಕ್ಕೂಟವು ಹೇಳಿಕೆಯಲ್ಲಿ ಉಲ್ಲೇಖಿಸಿದೆ.
