ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸಡನ್ ಆಪರೇಷನ್ನಿನ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ನಡೆದ ವಿದಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಹಲ ಶಾಸಕರು ಅಡ್ಡ ಮತದಾನ ಮಾಡಿದರಲ್ಲ? ಇದಾದ ನಂತರ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕ ಅರ್.ಅಶೋಕ್ ಅವರ ಪಟ್ಟ ಅಲುಗಾಡುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ವಿಜಯೇಂದ್ರ ಅವರನ್ನು ತೆಗೆದುಹಾಕುವಂತೆ ದೆಹಲಿ ನಾಯಕರಿಗೆ ಒತ್ತಾಯ ಮಾಡಿರುವ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.
ಬಿಜೆಪಿ ಕೇಂದ್ರ ನಾಯಕ ಪ್ರದೀಪ್ ಎಂಬುವವರ ಜೊತೆಗೆ ಡಿವಿ ಸದಾನಂದಗೌಡ ಅವರು ಇಂಗ್ಲಿಷ್ ನಲ್ಲಿ ನಡೆಸಿದ ಸಂಭಾಷಣೆ ಇದಾಗಿದ್ದು, ಇದರಲ್ಲಿ ಮೂರು ತಿಂಗಳ ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಿ ಎಂದು ಎಂಬ ಬೇಡಿಕೆ ಇಡಲಾಗಿದೆ. ಈ ಆಡಿಯೋ ಇದೀಗ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಮತ್ತೆ ಬಣ ಬಡಿದಾಟ ಶುರುವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಇನ್ನು ಮೂರು ತಿಂಗಳಲ್ಲಿ ಮೂರು ವರ್ಷ ಪೂರೈಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ ಮೂರು ವರ್ಷ ಇರುವುದು ಬಿಜೆಪಿಯಲ್ಲಿ ನಡೆದುಕೊಂಡು ಬಂದ ನಿಯಮವಾಗಿದೆ.
ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ವರೆಗೂ ವಿಜಯೇಂದ್ರ ಮುಂದುವರೆಯಲು ಬಿಡಿ, ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ಎಂಬುವುದು ಆಡಿಯೋದಲ್ಲಿ ಉಲ್ಲೇಖವಾಗಿದೆ. ಈಗಲೇ ತೆಗೆದು ಹಾಕಿದ್ರೆ ಬಿಜೆಪಿ ಮತ್ತೆ ಲಿಂಗಾಯತ ವಿರೋಧಿ ಅಂತ ಟೀಕೆಗೆ ಗುರಿ ಆಗುವ ಅಪಾಯ ಇದೆ. ಇದು ಪಕ್ಷಕ್ಕೆ ಡ್ಯಾಮೇಜ್ ಆಗಬಹುದು. ಹಾಗಾಗಿ ಮುಂದಿನ ಅಕ್ಟೋಬರ್ ವರೆಗೂ ಕಾದು ವಿಜಯೇಂದ್ರ ಅವರನ್ನು ಪದವಿಯಿಂದ ತೆಗೆಯುವಂತೆ ಮನವಿ ಮಾಡಲಾಗಿದೆ.
ಆಡಿಯೋ ಬಗ್ಗೆ ಸದಾನಂದಗೌಡ ಹೇಳಿದ್ದೇನು?
ಇನ್ನು ಈ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸದಾನಂದಗೌಡ ಅವರು, ಆಡಿಯೋ ಕುರಿತು ನಾನು ಯಾವುದೇ ಕಾಮೆಂಟ್‌ಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.
"ಆಡಿಯೋ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನದಲ್ಲದ ಆಡಿಯೋ ಮತ್ತು ವಿಡಿಯೋಗೆ ನಾನು ಉತ್ತರಿಸುವುದಿಲ್ಲ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ, ಹಾಗಾಗಿ ಉತ್ತರ ಕೊಡುವುದಿಲ್ಲ. ಆಡಿಯೋ ಬಗ್ಗೆ ಸತ್ಯ ಸಂಗತಿ ಹೊರಬರಲಿ. ನನ್ನ ಬಗ್ಗೆ ಬಹಳ ದಿನದಿಂದ ಚರ್ಚೆ ಆಗುತ್ತಿತ್ತು. ಕೋರ್ ಕಮಿಟಿ ಸಭೆಯಲ್ಲಿ ಕೆಲವು ಮಾತುಗಳನ್ನು ಹೇಳಿದ್ದೇನೆ. ಕೇಂದ್ರ ನಾಯಕರು, ರಾಜ್ಯ ನಾಯಕರು ಕೇಳಿದ್ರೆ ಉತ್ತರ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
