ಗ್ರಾಮೀಣ ಭಾರತದ ಹಿತಕ್ಕಾಗಿ ಕೇಂದ್ರ ಸರ್ಕಾರದ ಮುಂದೆ ಕರ್ನಾಟಕದ ಬಲವಾದ ಆಗ್ರಹ; ಸಚಿವ ಈಶ್ವರ ಖಂಡ್ರೆ

ನವದೆಹಲಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನವದೆಹಲಿಯಲ್ಲಿ ನಡೆದ ಎಲ್ಲಾ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಸಭೆಯಲ್ಲಿ ಕರ್ನಾಟಕದ ಗ್ರಾಮೀಣ ಜನರ ಹಿತಾಸಕ್ತಿಗೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಪ್ರಬಲವಾಗಿ ಪ್ರಸ್ತಾಪಿಸಿದರು.

ಉದ್ಯೋಗ ಖಾತ್ರಿ ಯೋಜನೆಯಿಂದ ಮಹಾತ್ಮಾ ಗಾಂಧೀಜಿ ಅವರ ಹೆಸರನ್ನು ಕೈಬಿಟ್ಟಿರುವುದು ಸೂಕ್ತವಲ್ಲ ಎಂದು ತಿಳಿಸಿದ ಸಚಿವರು, ಯೋಜನೆಗೆ "ಮಹಾತ್ಮಾಗಾಂಧಿ ವಿಬಿಜಿ ರಾಮ್ ಜಿ" ಎಂದು ಮರುನಾಮಕರಣ ಮಾಡಬೇಕು. ಅದು ಸಾಧ್ಯವಾಗದಿದ್ದರೆ ದೇಶದ 2.68 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮಾ ಗಾಂಧೀಜಿ ಅವರ ಹೆಸರನ್ನು ನೀಡುವ ಮೂಲಕ ರಾಷ್ಟ್ರಪಿತರಿಗೆ ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಕುಟುಂಬಗಳು ಉದ್ಯೋಗಕ್ಕೆ ಬೇಡಿಕೆ ಸಲ್ಲಿಸಿದಾಗ ವರ್ಷದ ಯಾವುದೇ ಸಮಯದಲ್ಲೂ ಉದ್ಯೋಗ ದೊರೆಯಬೇಕು. ಆದ್ದರಿಂದ ವರ್ಷದ 365 ದಿನಗಳೂ ಉದ್ಯೋಗ ಖಾತರಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು.

ಹೊಸ ಯೋಜನೆಯಲ್ಲಿ 60:40ರ ಕೇಂದ್ರ-ರಾಜ್ಯ ವೆಚ್ಚದ ಅನುಪಾತ ರಾಜ್ಯಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಉಂಟುಮಾಡುತ್ತಿದೆ. ಆದ್ದರಿಂದ ಮನರೇಗಾ ಮಾದರಿಯಲ್ಲೇ 90:10ರ ಅನುಪಾತವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ, 15ನೇ ಹಣಕಾಸು ಆಯೋಗದಡಿ ಕರ್ನಾಟಕಕ್ಕೆ ಬರಬೇಕಿರುವ ₹2,186 ಕೋಟಿ ಬಾಕಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಗ್ರಾಮೀಣ ಬಡವರು, ಕಾರ್ಮಿಕರು, ರೈತರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಸೇರಿದಂತೆ ಸಮಾಜದ ದುರ್ಬಲ ವರ್ಗಗಳ ಹಿತಾಸಕ್ತಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಜುಲೈ 1ರಿಂದ ಹೊಸ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ಸ್ಪಷ್ಟಪಡಿಸಿದರು.