'ವರ್ಷದ ಬ್ಯಾರಿ' ಪ್ರಶಸ್ತಿಗೆ ರಫೀಕ್ ಮಾಸ್ಟರ್ ಆಯ್ಕೆ: ಪ್ರಶಸ್ತಿಗೇ ಘನತೆ ತಂದ ಸಾಧಕ

     

ಬೆಂಗಳೂರು ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ನೀಡುವ ಪ್ರತಿಷ್ಠಿತ "ವರ್ಷದ ಬ್ಯಾರಿ" ವಾರ್ಷಿಕ ಪ್ರಶಸ್ತಿಗೆ ಖ್ಯಾತ ಪ್ರೇರಣಾ ಭಾಷಣಗಾರ ರಫೀಕ್ ಮಾಸ್ಟರ್ ಆಯ್ಕೆಯಾಗಿದ್ದಾರೆ. 

ರಫೀಕ್ ಮಾಸ್ಟರ್ ಅವರ ಅಪಾರ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ 28ರಂದು ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಬ್ಯಾರೀಸ್ ಸೌಹಾರ್ದ ಭವನದಲ್ಲಿ ನಡೆಯಲಿದೆ.

ರಫೀಕ್ ಮಾಸ್ಟರ್ ಎಂಬ ಹೆಸರು ಇಂದು ಶಿಕ್ಷಕ, ಲೇಖಕ, ಕೌನ್ಸಿಲರ್, ಪ್ರೇರಣಾದಾಯಕ ಭಾಷಣಕಾರ, ತರಬೇತುದಾರ, ಮತ್ತು ಸಮಾಜಸೇವಕ ಎಂಬ ಹಲವು ಗುರುತುಗಳೊಂದಿಗೆ ಸಾವಿರಾರು ಜನರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ. ಕಳೆದ ಮೂವತ್ತೆರಡು  ವರ್ಷಗಳಿಂದೀಚೆಗೆ ಅವರು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಶಿಕ್ಷಣ ಮತ್ತು ಸಮಾಜ ಸೇವೆಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಅಧ್ಯಾಪಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಜನರು ಅವರ ಮಾರ್ಗದರ್ಶನ ಮತ್ತು ತರಬೇತಿಯ ಫಲಾನುಭವಿಗಳಾಗಿದ್ದಾರೆ. ವಿಶೇಷವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಮನೆಯಲ್ಲಿ ಉಚಿತ ಕೌನ್ಸಿಲಿಂಗ್ ನಡೆಸಿರುವುದು ಅವರ ಸೇವೆಯ ವಿಶಿಷ್ಟ ಮುಖವಾಗಿದೆ. ಕೌನ್ಸಿಲಿಂಗ್ ನೀಡಿ ಕೈತೊಳೆದುಕೊಳ್ಳುವ ವ್ಯಕ್ತಿತ್ವ ಅವರದಲ್ಲ. ಒಮ್ಮೆ ಭೇಟಿಯಾದ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯ ಮೇಲೆ ಮುಂದೆಯೂ ಗಮನ ಹರಿಸಿ, ಅಗತ್ಯ ಸಲಹೆ-ಸಹಾಯ ನೀಡುತ್ತಾ ಸಾಗುವುದು ಅವರ ಅಪರೂಪದ ಗುಣವಾಗಿದೆ.

ಇಂದಿನ ಕಾಲದಲ್ಲಿ ಪ್ರಶಸ್ತಿಗಳಿಗಾಗಿ ಓಡಾಟ, ಶಿಫಾರಸು, ಅರ್ಜಿ ಸಲ್ಲಿಕೆ ಸಾಮಾನ್ಯವಾಗಿರುವಾಗ, ರಫೀಕ್ ಮಾಸ್ಟರ್ ಎಂದಿಗೂ ಪ್ರಶಸ್ತಿಗಳ ಹಿಂದೆ ಹೋದವರಲ್ಲ. ತಮ್ಮ ಸೇವೆಯನ್ನೇ ಧ್ಯೇಯವನ್ನಾಗಿ ಮಾಡಿಕೊಂಡು ಬದುಕಿದ ಅವರು, ಹಲವಾರು ಉನ್ನತ ಗೌರವಗಳಿಗೆ ಅರ್ಹರಾಗಿದ್ದರೂ ಅವುಗಳಿಗಾಗಿ ಯಾವುದೇ ಪ್ರಯತ್ನ ನಡೆಸಿದವರಲ್ಲ. ಅವರ ವ್ಯಕ್ತಿತ್ವದ ಎತ್ತರವೇ ಅದು.

ಅವರು ಆಗಾಗ ಹೇಳುವ ಮಾತು: "ನಾನು ನನ್ನ ಸೇವೆಯಿಂದ ಯಾವುದೇ ಭೌತಿಕ ಪ್ರತಿಫಲವನ್ನು ನಿರೀಕ್ಷಿಸುವುದಿಲ್ಲ. ಆದರೂ ಅಲ್ಲಾಹನು ನನ್ನ ಜೀವನದಲ್ಲಿ ಯಾವುದೇ ಕೊರತೆಯನ್ನು ಉಂಟುಮಾಡಿಲ್ಲ."

ಈ ನಂಬಿಕೆಯೇ ಅವರ ಸೇವಾ ಬದುಕಿನ ಅಡಿಪಾಯವಾಗಿದೆ.

ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ "Simple living, High Thinking" ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ರಫೀಕ್ ಮಾಸ್ಟರ್, ಸರಳತೆಯ ಮೂಲಕವೇ ದೊಡ್ಡತನವನ್ನು ಸಾಧಿಸಿದ ವ್ಯಕ್ತಿ. ಸರ್ಕಾರಿ ಶಾಲೆಗಳ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ  ಅವರು, ಅನೇಕ ಸಂದರ್ಭಗಳಲ್ಲಿ ದೊರೆಯುವ ಸಂಭಾವನೆಗಿಂತ ಹೆಚ್ಚಿನ ಹಣವನ್ನು ತಮ್ಮ ಪ್ರಯಾಣಕ್ಕಾಗಿ ಖರ್ಚು ಮಾಡಿದ ಉದಾಹರಣೆಗಳಿವೆ. ಸಾಧ್ಯವಾದಷ್ಟು ಖಾಸಗಿ ವಾಹನಗಳನ್ನು ಬಳಸದೆ ಬಸ್ಸಿನಲ್ಲಿ ಸಂಚರಿಸುತ್ತಾರೆ. ಅದರ ಬಗ್ಗೆ ಕೇಳಿದಾಗ ಅವರು ನಗುತ್ತಾ ಹೇಳುವ ಮಾತು:

"ಆನೆಯಾಗಿ ಹೋಗಲು ನನಗೆ ಇಷ್ಟವಿಲ್ಲ; ಆಡಾಗಿ ಹೋಗುವುದೇ ನನಗೆ ಇಷ್ಟ."

ಈ ಒಂದೇ ವಾಕ್ಯ ಅವರ ಸರಳತೆ, ವಿನಯ ಮತ್ತು ಬದುಕಿನ ದೃಷ್ಟಿಕೋನವನ್ನು ಸ್ಪಷ್ಟಪಡಿಸುತ್ತದೆ.

ಶಿಕ್ಷಕ, ಕೌನ್ಸಿಲರ್, ಮೋಟಿವೇಟರ್, ಟ್ರೈನರ್, ನಿರೂಪಕ ಹಾಗೂ ಸಮಾಜಸೇವಕನಾಗಿ ಮೂರು ದಶಕದಿಂದಲೂ ಹೆಚ್ಚು  ಸಕ್ರಿಯವಾಗಿ ಸೇವೆ ಸಲ್ಲಿಸಿರುವ ರಫೀಕ್ ಮಾಸ್ಟರ್ ಅವರಿಗೆ "ವರ್ಷದ ಬ್ಯಾರಿ" ಪ್ರಶಸ್ತಿ ದೊರೆತಿರುವುದು ಸಂತಸದ ಸಂಗತಿ. ಆದರೆ ನಿಜ ಹೇಳಬೇಕೆಂದರೆ,  ಇವರಂತಹ ವ್ಯಕ್ತಿಯನ್ನು ಗೌರವಿಸುವ ಮೂಲಕ ಈ ಪ್ರಶಸ್ತಿಯ ಗೌರವ ಮತ್ತು ಮೌಲ್ಯ ಹೆಚ್ಚುತ್ತದೆ. ಇವರಂತಹ ಮಹನೀಯರ ಸ್ಪರ್ಶದಿಂದಲೇ ಪ್ರಶಸ್ತಿಗೆ ಇನ್ನಷ್ಟು ಘನತೆ ಮತ್ತು ಅರ್ಥ ದೊರೆಯುತ್ತದೆ. ಇಂತಹ ನಿಸ್ವಾರ್ಥ ಸೇವಕರು ಸಮಾಜಕ್ಕೆ ದಾರಿದೀಪಗಳಾಗಿ ಮುಂದುವರಿಯಲಿ ಎಂಬುದು ಎಲ್ಲರ ಹಾರೈಕೆ.

-ಡಿ‌.ಐ. ಅಬೂಬಕರ್ ಕೈರಂಗಳ