ಬೆಂಗಳೂರು: ಬಿಡದಿಯ ಟೌನ್‌ಶಿಪ್‌ಗೆ ರೈತರ ಭೂಮಿ ಸ್ವಾದೀನ ವಿರೋಧಿಸಿ ರಾಜ್ಯ ಬಿಜೆಪಿ ಬೆಂಗಳೂರಿನಲ್ಲಿಂದು ಬೃಹತ್ ಪ್ರತಿಭಟನಾ ಧರಣಿ ನಡೆಸಿ, ಟೌನ್‌ಶಿಪ್ ಯೋಜನೆ ವಿರುದ್ಧ ರಣಕಹಳೆ ಮೊಳಗಿಸಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಧರಣಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಎಲ್ಲ ಪ್ರಮುಖ ನಾಯಕರುಗಳು ಭಾಗಿಯಾಗಿ, ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ, ರಾಜ್ಯ ಸರ್ಕಾರ ರೈತರ ವಿರೋಧಿ ಸರ್ಕಾರ ಎಂದು ಗುಡುಗಿದರು.
ಬಿಡದಿ ಟೌನ್‌ಶಿಪ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು. ಈ ಯೋಜನೆಯನ್ನು ಜಾರಿ ಮಾಡಿದರೆ ಬಿಜೆಪಿ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ನಡೆಸಲಿದೆ ಎಂದು ಬಿಜೆಪಿ ನಾಯಕರುಗಳು ಹೇಳಿದರು.
ಟೌನ್‌ಶಿಪ್ ಹೆಸರಿನಲ್ಲಿ ರೈತರ ಜಮೀನು ಲೂಟಿ ವಿರುದ್ಧ ರಣಕಹಳೆ ಮೊಳಗಿಸಿದ ಬಿಜೆಪಿ ನಾಯಕರುಗಳು, ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು
ಬಿಡದಿ ಟೌನ್‌ಶಿಪ್ ನೆಪದಲ್ಲಿ ರಾಜ್ಯ ಸರ್ಕಾರ ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದೆ ಎಂದು ದೂರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಯಾವುದೇ ಕಾರಣಕ್ಕೂ ಟೌನ್‌ಶಿಪ್‌ಗೆ ರೈತರ ಜಮೀನನ್ನು ಸ್ವಾದೀನಪಡಿಸಿಕೊಳ್ಳಲು ಬಿಡಲ್ಲ ಎಂದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿಂದು ಬಿಡದಿ ಟೌನ್‌ಶಿಪ್ ವಿರೋಧಿಸಿ ಬಿಜೆಪಿ ನಡೆಸಿದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಡದಿ ಭಾಗದಲ್ಲಿ ರೈತರ ಜಮೀನುಗಳನ್ನು ಬಲವಂತವಾಗಿ ಕಸಿದುಕೊಳ್ಳುವ ಹುಚ್ಚಾಟ ನಡೆಸಿದೆ. ಇದಕ್ಕೆ ನಾವು ಅವಕಾಶ ಕೊಡಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್‌ಗೆ ನನ್ನನ್ನು ಮುಖ್ಯಮಂತ್ರಿ ಮಾಡಿದರೆ ಬಿಡದಿ ಟೌನ್‌ಶಿಪ್ ಮಾಡಿಕೊಡುತ್ತೇನೆ. ಡಿಎಲ್‌ಎಫ್ ಸಂಸ್ಥೆಗೆ ಸಹಾಯ ಮಾಡಿಕೊಡುತ್ತೇನೆ ಎಂದು ಕಾಂಗ್ರೆಸ್ ವರಿಷ್ಠೆ ಪ್ರಿಯಾಂಕ ಗಾಂಧಿ ಅವರಿಗೆ ಭರವಸೆ ನೀಡಿದ್ದರು. ಈ ಭರವಸೆ ಈಡೇರಿಸಲು ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ರೈತ ಕುಟುಂಬಗಳ ಮೇಲೆ ಸರ್ಕಾರ ಗೂಂಡಾಗಿರಿ, ದರ್ಪ ತೋರುತ್ತಿದೆ ಎಂದು ಆರೋಪಿಸಿದರು.
ಬಿಡದಿ ಟೌನ್‌ಶಿಪ್ ವಿರೋಧಿಸಿ ಹೋರಾಟ ಮಾಡುತ್ತಿರುವ ಜಮೀನು ನೀಡಲು ಒಪ್ಪದ ರೈತ ಕುಟುಂಬಗಳ ಮನೆಗೆ ಗುಂಡಾಗಳನ್ನು ಕಳುಹಿಸಿ ಪ್ರಾಣ ಬೆದರಿಕೆ ಹಾಕಲಾಗುತ್ತಿದೆ.. ಅಲ್ಲದೆ ರೈತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟುವ ಕುತಂತ್ರವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರಾಜ್ಯ ಸರ್ಕಾರ ರೈತ ವಿರೋಧಿಯಾಗಿ ನಡೆದುಕೊಂಡಿದ್ದರೂ ರೈತರ ರಕ್ಷಣೆ ಮಾಡುತ್ತೇನೆ ಎಂದಿರುವ ರಾಹುಲ್‌ಗಾಂಧಿ ಮೌನ ವಹಿಸಿರುವುದು ಅಚ್ಚರಿ ತಂದಿದೆ ಎಂದ ಅವರು, ಟೌನ್‌ಶಿಪ್ ಯೋಜನೆಯನ್ನು ಕೈಬಿಡುವವರೆಗೂ ಬಿಜೆಪಿ ಹೋರಾಟ ಮುಂದುವರೆಯಲಿದೆ ಎಂದರು.
ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದರು.
ಬಿಡದಿ ಟೌನ್‌ಶಿಪ್ ವಿರೋಧಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿ ನಡೆಸಿದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಯೋಜನೆಗೆ ಅವಕಾಶ ಕೊಡುವುದಿಲ್ಲ. ಕಾಂಗ್ರೆಸ್ ಸರ್ಕಾರ ಲ್ಯಾಂಡ್ ಮಾಫಿಯಾ ಸರ್ಕಾರ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಪ್ರತಿಪಕ್ಷ ನಾಯಕರಾದ ಶ್ರೀ ಆರ್. ಅಶೋಕ್ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಶ್ರೀ ಬಿ. ಶ್ರೀರಾಮುಲು, ಶ್ರೀ ಬೈರತಿ ಬಸವರಾಜ್, ಶ್ರೀ ಸುರೇಶ್ ಕುಮಾರ್, ಶ್ರೀ ಸಿ. ಟಿ. ರವಿ, ಶ್ರೀ ಮುನಿರತ್ನ, ಶಾಸಕರಾದ ಶ್ರೀ ಎಸ್. ಆರ್. ವಿಶ್ವನಾಥ್, ಡಾ. ಶೈಲೇಂದ್ರ ಬೆಲ್ದಾಳೆ, ಶ್ರೀ ಸಿಮೆಂಟ್ ಮಂಜು, ಶ್ರೀ ಧೀರಜ್ ಮುನಿರಾಜು, ಶ್ರೀ ಹರೀಶ್ ಪೂಂಜ, ಶ್ರೀ ಸಿ. ಕೆ. ರಾಮಮೂರ್ತಿ, ಶ್ರೀ ಎಂ. ಚಂದ್ರಪ್ಪ, ಪ್ರತಿಪಕ್ಷ ಉಪನಾಯಕರಾದ ಶ್ರೀ ಅರವಿಂದ ಬೆಲ್ಲದ್, ವಿಧಾನಸಭಾ ವಿಪಕ್ಷ ಮುಖ್ಯ ಸಚೇತಕರಾದ ಶ್ರೀ ದೊಡ್ಡನಗೌಡ ಜಿ. ಪಾಟೀಲ್, ವಿಧಾನ ಪರಿಷತ್ ವಿಪಕ್ಷ ಮುಖ್ಯಸಚೇತಕರಾದ ಶ್ರೀ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ರಘು ಕೌಟಿಲ್ಯ, ಶ್ರೀಮತಿ ಭಾರತಿ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ವೈ. ಎ. ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ತಮ್ಮೇಶ್ ಗೌಡ, ಡಾ. ಲಕ್ಷ್ಮೀ ಅಶ್ವಿನ್ ಗೌಡ, ಮಾಜಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ನಿರ್ಮಲ್ ಕುಮಾರ್ ಸುರಾನ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ ಸಪ್ತಗಿರಿ ಗೌಡ, ಮಾಜಿ ಶಾಸಕರು, ಪದಾಧಿಕಾರಿಗಳು, ಪ್ರಮುಖರು, ರೈತರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

