ಭಾರತವನ್ನು ವಿಶ್ವಗುರು ಎನ್ನುವುದನ್ನು ನಿಲ್ಲಿಸಿ: ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಆಕ್ರೋಶ

  

ನವದೆಹಲಿ: ದೇಶಾದ್ಯಂತ 93,000 ಶಾಲೆಗಳು ಮುಚ್ಚಲ್ಪಟ್ಟಿವೆ. ಭಾರತವನ್ನು ವಿಶ್ವಗುರು (Vishwaguru) ಎಂದು ಕರೆಯುವುದನ್ನು ನಿಲ್ಲಿಸಿ ಎಂದು ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಾಯಕಿ ಅನುರಾಧಾ ಪೌಡ್ವಾಲ್ (Anuradha Paudwal) ಆಕ್ರೋಶ ಹೊರಹಾಕಿದ್ದಾರೆ. 

ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ (Shubhankhar Mishra's podcast) ಇತ್ತೀಚೆಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಬಿಜೆಪಿ (BJP) ಸರ್ಕಾರವನ್ನು ಟೀಕಿಸಿದರು.

ಎಲ್ಲರೂ ಭಾರತ ವಿಶ್ವ ಗುರು ಆಗುತ್ತದೆ ಎನ್ನುತ್ತಾರೆ. ಕೆಲವು ವರ್ಷಗಳ ಹಿಂದೆ ನಾನು ಕೂಡ ನಮ್ಮ ದೇಶ ವಿಶ್ವ ಗುರು ಆಗುತ್ತದೆ ಎಂದು ಬಲವಾಗಿ ನಂಬಿದ್ದೆ. ಆದರೆ ಈಗ ಅದು ಸುಳ್ಳಾಗುತ್ತಿದೆ ಎಂದು ಹೇಳಿದರು. 

ದೇಶ ಈಗ ವಿಶ್ವ ಗುರುವಿನ ಕಲ್ಪನೆಗೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಹೀಗಾದರೆ ನಾವು ವಿಶ್ವ ಗುರುಗಳಾಗುವುದು ಹೇಗೆ ಎಂದು ಪ್ರಶ್ನಿಸಿದ ಅವರು, ವಿಶ್ವಗುರುವಾಗಲು ನಾವು ವಿದ್ಯಾವಂತರಾಗಬೇಕು. ಆದರೆ ನಮ್ಮ ದೇಶದಲ್ಲಿ 93,000 ಶಾಲೆಗಳು ಮುಚ್ಚಲ್ಪಟ್ಟಿವೆ. ಹಾಗಾದರೆ ವಿಶ್ವಗುರುವಿನ ಮೂಲ ತತ್ತ್ವ ಏನು? ಕನಸುಗಳ ಮೇಲೆ ನಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಏನಾದರೂ ಮಾಡಲೇಬೇಕು ಎಂದರು.

ಅವರು ರಾಮರಾಜ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಇಲ್ಲಿ ದೇವಾಲಯವನ್ನೇ ಲೂಟಿ ಮಾಡಲಾಗಿದೆ. ನಾನೇನು ನಾವು ವಿಶ್ವ ಗುರು ಆಗುವುದರ ವಿರೋಧಿಯಲ್ಲ. ಆದರೆ ಅದಕ್ಕೆ ಸಂಬಂಧಿಸಿದ ನಿಯಮಗಳೇನು? ಅದನ್ನು ಅನುಸರಿಸುವುದು ಯಾವ ರೀತಿ ಎಂಬುದನ್ನು ಹೇಳಬೇಕು ಎಂದು ಕೇಳಿದರು.

ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಟ ಅನುಪಮ್ ಖೇರ್ ಕೂಡ ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಹೇಳಿಕೆ ನೀಡಿದ್ದರು. ಮೊಘಲರು ನಮ್ಮ ದೇವಾಲಯಗಳನ್ನು ಲೂಟಿ ಮಾಡಿದ್ದರು. ಅವರು ಬ್ರಾಹ್ಮಣರನ್ನು ಕೊಂದು, ಅವರ ಪವಿತ್ರ ದಾರಗಳನ್ನು ತೆಗೆದು ದರೋಡೆ ಮಾಡಿದ್ದರು ಎಂದಿದ್ದರು.