ಬೆಂಗಳೂರು: ಕಾಮಾಕ್ಷಿಪಾಳ್ಯದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಹೆಬ್ಬಾವು ಸಾಕುತ್ತಿದ್ದ ವ್ಯಕ್ತಿ! ಅರಣ್ಯ ಇಲಾಖೆ ಅಧಿಕಾರಿಗಳಿಂದ ದಾಳಿ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವ್ಯಕ್ತಿಯೊಬ್ಬ ಅಕ್ರಮವಾಗಿ ಮನೆಯಲ್ಲಿಯೇ ಪೈಥಾನ್(ಹೆಬ್ಬಾವು) ಸಾಕುತ್ತಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್ ನಲ್ಲಿ ಅಕ್ರಮವಾಗಿ ಹೆಬ್ಬಾವು ಸಾಕುತ್ತಿದ್ದ ವ್ಯಕ್ತಿಯ ಮನೆಯ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಫ್ಲ್ಯಾಟ್‌ನಲ್ಲಿ ಕಾಟನ್ ಬಾಕ್ಸ್‌ನಲ್ಲಿ ಇರಿಸಲಾಗಿದ್ದ ಹೆಬ್ಬಾವನ್ನು ಪತ್ತೆಹಚ್ಚಿ, ವಶಕ್ಕೆ ಪಡೆದಿದ್ದಾರೆ.

ಅನುಮತಿ ಇಲ್ಲದೆ ವನ್ಯಜೀವಿ ಸಾಕಿರುವ ಆರೋಪದ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ NCR ದಾಖಲಿಸಲಾಗಿದೆ.

ಫ್ಲ್ಯಾಟ್‌ನಲ್ಲಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಈ ಫ್ಲ್ಯಾಟ್‌ನಲ್ಲಿ ವಾಸವಿದ್ದ ವ್ಯಕ್ತಿ ಆಂಧ್ರಪ್ರದೇಶ ಮೂಲದವನು ಎಂದು ತಿಳಿದುಬಂದಿದೆ.