ಉಡುಪಿ: ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜಾರು ಗ್ರಾಮದ ಮೂಡು ಅಂಜಾರು ಕಲ್ಕುಡ ದೇವಸ್ಥಾನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಜೂಜಾಟದ ಮೇಲೆ ಪೊಲೀಸರು ದಾಳಿ ನಡೆಸಿ 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದ ತಂಡವು, ಕೋಳಿಗಳ ಕಾಲಿಗೆ ಹರಿತವಾದ ಬಾಳುಗಳನ್ನು ಕಟ್ಟಿ ಕಾಳಗ ನಡೆಸುತ್ತಾ, ಅದರ ಮೇಲೆ ಹಣ ಪಣವಾಗಿಟ್ಟು ಜೂಜಾಟ ಆಡುತ್ತಿರುವುದನ್ನು ದೃಢಪಡಿಸಿಕೊಂಡಿತು. ಸಿಬ್ಬಂದಿಯ ಮೂಲಕ ದಾಳಿ ನಡೆಸಿದ ವೇಳೆ, ಕೆಲವರು ಕಾಳಗದ ಕೋಳಿಗಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.
ದಾಳಿಯ ವೇಳೆ 8 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರಿಂದ ₹36,270 ನಗದು, 8 ಮೋಟಾರ್ ಸೈಕಲ್‌ಗಳು ಹಾಗೂ ಒಂದು ಕಾರನ್ನು ಜಪ್ತಿ ಮಾಡಲಾಗಿದೆ.
ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 46/2026ರಡಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87 ಹಾಗೂ ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆಯ ಕಲಂ 11(1)(a) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ. ಹಾಗೂ ಬ್ರಹ್ಮಾವರ ವೃತ್ತದ ಪೊಲೀಸ್ ನಿರೀಕ್ಷಕ ಗೋಪೀಕೃಷ್ಣ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಪುನೀತ್ ಕುಮಾರ್ ಬಿ.ಇ. ಮತ್ತು ಪಿಎಸ್‌ಐ ವಿಠ್ಠಲ ಮಲವಡಕರ ನೇತೃತ್ವದಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.
