ಉಡುಪಿ: ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರವೇ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಹಲವು ಬಾರಿ ಪುರಸಭೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಾರ್ವಜನಿಕರು ರಸ್ತೆ ಮಧ್ಯದ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಕಾರ್ಕಳ ಪುರಸಭೆ ವ್ಯಾಪ್ತಿಯ ಕಲ್ಲೊಟ್ಟೆ-ಬಂಡಿಮಠ ರಸ್ತೆಯಲ್ಲಿ ನಡೆದಿದೆ.
ಕಾರ್ಕಳ ಮಾರ್ಕೆಟ್ ರಸ್ತೆಯಿಂದ ಪೆರ್ವಾಜೆ, ಕಲ್ಲೊಟ್ಟೆ ಮೂಲಕ ಬಂಡಿಮಠಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ತೀವ್ರ ಹದಗೆಟ್ಟಿದ್ದು, ವಾಹನಗಳಷ್ಟೇ ಅಲ್ಲದೆ ಪಾದಚಾರಿಗಳ ಸಂಚಾರಕ್ಕೂ ತೀವ್ರ ತೊಂದರೆ ಉಂಟಾಗಿದೆ.
ಕಾರ್ಕಳದಿಂದ ಉಡುಪಿ ಹಾಗೂ ಹೆಬ್ರಿ ಕಡೆಗೆ ಸಂಚರಿಸುವ ಬಸ್‌ಗಳಿಗೆ ಈ ರಸ್ತೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಆದರೆ ರಸ್ತೆ ತುಂಬಾ ಆಳವಾದ ಗುಂಡಿಗಳು ನಿರ್ಮಾಣವಾಗಿರುವುದರಿಂದ ಭಾರೀ ವಾಹನಗಳು ಕಷ್ಟಪಟ್ಟು ಸಂಚರಿಸುತ್ತಿದ್ದು, ಲಘು ವಾಹನಗಳು, ತ್ರಿಚಕ್ರ ವಾಹನಗಳು ಹಾಗೂ ದ್ವಿಚಕ್ರ ವಾಹನಗಳ ಸಂಚಾರ ಬಹುತೇಕ ಅಸಾಧ್ಯವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸುಮಾರು ಒಂದು ವರ್ಷದಿಂದ ಅಮೃತ್ ಯೋಜನೆಯಡಿ ಈ ರಸ್ತೆಯಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು ಮುಖ್ಯ ಕೊಳವೆ ಅಳವಡಿಕೆಗಾಗಿ ರಸ್ತೆ ಅಗೆದು ಬಳಿಕ ಮಣ್ಣು ಮುಚ್ಚಲಾಗಿದೆ. ಆದರೆ ಕಾಮಗಾರಿ ಸಮರ್ಪಕವಾಗಿ ಪೂರ್ಣಗೊಳ್ಳದ ಕಾರಣ ರಸ್ತೆ ಅಲ್ಲಲ್ಲಿ ಕುಸಿದು ಗುಂಡಿಗಳು ಉಂಟಾಗಿವೆ. ಅಳವಡಿಸಿರುವ ಪೈಪ್‌ಲೈನ್‌ಗಳು ಪದೇ ಪದೇ ಸೋರಿಕೆಯಾಗುತ್ತಿರುವುದರಿಂದ ಮರು ದುರಸ್ತಿ ಕಾಮಗಾರಿ ನಿರಂತರವಾಗಿ ನಡೆಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದಲ್ಲದೆ ರಸ್ತೆ ಬದಿಯ ಚರಂಡಿಯ ಮೋರಿಯನ್ನೂ ಅಗೆದು ಬಿಟ್ಟಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು ರಸ್ತೆ ಮತ್ತಷ್ಟು ಹಾಳಾಗಿದೆ. ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಮೃತ್ ಯೋಜನೆಯ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಹಲವು ಬಾರಿ ಬಂದಿದ್ದರೂ ಪುರಸಭೆ ಹಾಗೂ ಸಂಬಂಧಿತ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ರಸ್ತೆ ಮಧ್ಯದ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ವಿನೂತನ ಪ್ರತಿಭಟನೆ ನಡೆಸಿದರು.
