ಕಾರ್ಕಳ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಕಾರ್ಕಳ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸುಮಾರು 67 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಶೆಟ್ಟಿ ಹೇಳಿದರು.
ಕಾರ್ಕಳ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಸ್ತೆ ಅಭಿವೃದ್ಧಿ ಸಹಿತ ದೇವಸ್ಥಾನ, ದೈವಸ್ಥಾನ ಇತರೆ ಮೂಲಸೌಕರ್ಯ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರ ಸಾಕಷ್ಟು ಅನುದಾನ ನೀಡುವ ಮೂಲಕ ಅಭಿವೃದ್ಧಿ ಕೆಲಸಗಳಲ್ಲಿ ಯಾವುದೇ ತಡೆ, ರಾಜಕೀಯ ಮಾಡದೇ ತಮ್ಮ ಜವಾಬ್ದಾರಿ ಮೆರೆದಿದೆ ಆದರೆ ಶಾಸಕ ಸುನಿಲ್ ಕುಮಾರ್ ಅವರು ಅಭಿವೃದ್ಧಿ ಕೆಲಸಗಳಿಗೆ ತಡೆ ನೀಡಲಾಗುತ್ತಿದೆ ಎಂದು ನಿರಂತರ ಆರೋಪ ಮಾಡುವ ಮೂಲಕ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
ಪರಶುರಾಮ ಥೀಮ್ ಪಾರ್ಕ್ ಮಾತ್ರವಲ್ಲದೆ, ಕ್ಷೇತ್ರದಲ್ಲಿ ಅನುಷ್ಠಾನಗೊಂಡಿರುವ ಹಲವು ಪ್ರಮುಖ ಯೋಜನೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ವೈಫಲ್ಯಗಳು ನಡೆದಿವೆ ಧರ್ಮ ದೇವರ ಹೆಸರಿನಲ್ಲಿ ಕ್ಷೇತ್ರದ ಜನತೆಗೆ ದ್ರೋಹ ಬಗೆದಿ ದ್ದಾರೆ ಒಳಚರಂಡಿ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಈಜುಕೊಳ ಹಾಗೂ ನರ್ಸಿಂಗ್ ಕಾಲೇಜು ನಿರ್ಮಾಣ ಎಲ್ಲವೂ ಅವ್ಯವಸ್ಥೆ ಮತ್ತು ಭ್ರಷ್ಟಾಚಾರದಿಂದ ಕೂಡಿರುವ ಯೋಜನೆಗಳಾಗಿವೆ ಎಂದು ಟೀಕಿಸಿದರು.
ಕಾಂಗ್ರೆಸ್ ಯಾವತ್ತೂ ಪರಶುರಾಮ್ ಥೀಮ್ ಪಾರ್ಕ್ ವಿಷಯದಲ್ಲಿ ಸುಳ್ಳು, ಮೋಸ, ದ್ರೋಹ ಮಾಡಿಲ್ಲ ಚುನಾವಣಾ ವಸ್ತುವಾಗಿ ಬಿಂಬಿಸಿಲ್ಲ ಬದಲಾಗಿ ಸುನೀಲ್ ಕುಮಾರ್ ಅವರೇ ಚುನಾವಣಾ ಉದ್ದೇಶದಿಂದ ನಕಲಿ ಮೂರ್ತಿ ಸ್ಥಾಪನೆ ಮಾಡಿದ್ದು ಈ ಬಗ್ಗೆ ಹೋರಾಟ ಪ್ರಾರಂಭ ಮಾಡಿದ್ದೇ ಬಿಜೆಪಿ ಬಿ ಟೀಮ್ ಆಗಿದೆ ಎಂದು ಅವರು ಇದೇ ವೇಳೆ ಲೇವಡಿ ಮಾಡಿದರು.
"ಮಾರಿಗುಡಿ ದೇವಸ್ಥಾನ ವಿಚಾರದಲ್ಲಿ ನಾವು ರಾಜಕೀಯ ಮಾಡಿಲ್ಲ, ಅದನ್ನು ದೇವರೇ ನೋಡಿಕೊಳ್ಳುತ್ತಾರೆ. ದೇವರ ಹೆಸರಿನಲ್ಲಿ ಮೋಸ ಮಾಡುವಲ್ಲಿ ಬಿಜೆಪಿಯವರು ಎತ್ತಿದ ಕೈ. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಮತ್ತು ಮೂಲಸೌಕರ್ಯ ಸಮಸ್ಯೆಗಳಿದ್ದಾಗ ಗಮನ ಹರಿಸದ ಶಾಸಕರು, ಈಗ ಅಭಿವೃದ್ಧಿಯ ಬಗ್ಗೆ ಮಾತನಾ ಡುತ್ತಿದ್ದಾರೆ. ಕೇಂದ್ರ ಸರಕಾರದ ಅನುದಾನದಿಂದ ಕ್ಷೇತ್ರಕ್ಕೆ ಎಷ್ಟು ಅಭಿವೃದ್ಧಿ ಕೆಲಸಗಳನ್ನು ತಂದಿದ್ದಾರೆ ಎಂಬುದನ್ನು ಅವರು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು" ಎಂದು ಆಗ್ರಹಿಸಿದರು.
"ಅಭಿವೃದ್ಧಿ ಕೆಲಸದಲ್ಲಿ ನಾವು ಎಂದಿಗೂ ರಾಜಕಾರಣ ಮಾಡುತ್ತಿಲ್ಲ. ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಇದರ ಅಗತ್ಯವೂ ಇಲ್ಲ. ಪರಶುರಾಮ ಥೀಮ್‌ಪಾರ್ಕ್ ವಿಷಯದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವ ಇವರು, ಕೋರ್ಟ್ ವಿಚಾರಣೆಯಲ್ಲಿ ಜನರ ದುಡ್ಡನ್ನು ಲೂಟಿ ಮಾಡಿದ್ದಾರೆ. ಈ ವಿಚಾರವಾಗಿ ಸ್ವತಃ ಹೈಕೋರ್ಟ್ ನ್ಯಾಯ ಮೂರ್ತಿಯವರು ಛಾಟಿ ಬೀಸಿದ್ದಾರೆ. ಈಗಲೂ ಲೂಟಿ ಮಾಡಿದ 1. 36ಕೋಟಿ ರೂ. ಸರಕಾರಕ್ಕೆ ಹಿಂದಿರಿಗಿಸಿದರೆ ಮುಂದಿನ ಕಾಮಗಾರಿಗೆ ಅನುವು ಮಾಡಿಕೊಡುವ ಬಗ್ಗೆ ಕೋರ್ಟ್ ಹೇಳಿದೆ. ಇದಕ್ಕೆ ಇವರು ಯಾರೂ ಸ್ಪಂದನೆ ನೀಡುತ್ತಿಲ್ಲ, ಹಾಗಿದ್ದರೆ ತಪ್ಪು ಯಾರದು? ಪರಶುರಾಮ್ ಥೀಮ್ ಪಾರ್ಕ್ ಗೆ ಗೋಮಾಳ ಭೂಮಿಯನ್ನು ಮಂಜೂರು ಮಾಡಿದ್ದೂ, ಉದ್ಘಾಟನೆ ಮಾಡಿದ್ದೂ, ಕೊನೆಗೂ ಭೂ ಮಂಜೂರು ಆದೇಶ ರದ್ದು ಮಾಡಿದ್ದೂ ಬಿಜೆಪಿ ಸರಕಾರನೇ ಹೊರತು ನಾವಲ್ಲ ಈ ವಿಚಾರದಲ್ಲಿ ಶಾಸಕರು ಯಾವುದೇ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ, ನಾನು ಸಿದ್ಧನಿದ್ದೇನೆ" ಎಂದು ಮುನಿಯಾಲು ಉದಯ್ ಶೆಟ್ಟಿ ಹೇಳಿದರು. ಕಾಂಗ್ರೆಸ್ ಸರಕಾರವು ನಿರಂತರ ಜನಪರ ಕಾರ್ಯಕ್ರಮಗಳ ಮೂಲಕ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಕಾರ್ಕಳದಲ್ಲಿ ಕೈಗೊಳ್ಳಲಿದೆ ಎಂದರು.
ಸುನೀಲ್ ಕುಮಾರ್ ರವರಿಗೆ ಯಾವುದೇ ಕೆಲಸವಾದರೂ ತಾನು ಮಾಡಿಸಿದ್ದು ಸುಳ್ಳು ಹೇಳುವುದು ಕೆಲಸ ಕಳಪೆಯಾದರೆ ಬೇರೆಯವರ ಮೇಲೆ ದೂರು ಹಾಕುವುದು ಬೇರೆಯವರಿಂದ ಕೆಲಸ ಆಗಬಾರದೆಂದು ಅಡ್ಡಿ ಒಡ್ದುವುದು ಅಭ್ಯಾಸ ವಾಗಿ ಬಿಟ್ಟಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭಧ ರಾವ್, ಮುಖಂಡರಾದ ಪ್ರದೀಪ ಬೇಲಾಡಿ, ಸುರೇಶ್ ಹಾಗೂ ಸಂತೋಷ್ ದೇವಾಡಿಗ ಉಪಸ್ಥಿತರಿದ್ದರು.
