ಹೊಸದಿಲ್ಲಿ: ರಾಮ ಮಂದಿರದ ದೇಣಿಗೆಗಳ ಕಳ್ಳತನದ ಆರೋಪಿಗಳ ಪರವಾಗಿ ವಕೀಲರು ವಾದ ಮಂಡಿಸದಂತೆ ಫೈಜಾಬಾದ್ ವಕೀಲರ ಸಂಘವು (FBA) ಅಂಗೀಕರಿಸಿರುವ ನಿರ್ಣಯವನ್ನು ವಿಶ್ವ ಹಿಂದು ಪರಿಷತ್ (VHP) ಮಂಗಳವಾರ ಟೀಕಿಸಿದೆ. ಈ ಕ್ರಮವು ಸಾಂವಿಧಾನಿಕ ತತ್ವಗಳು ಮತ್ತು ವೃತ್ತಿಪರ ನೈತಿಕತೆಯನ್ನು ಉಲ್ಲಂಘಿಸುತ್ತದೆ ಎಂದು ಅದು ಹೇಳಿದೆ.
ದೇಣಿಗೆ ಹಣ ಕಳ್ಳತನದ ಆರೋಪಿಗಳ ಪರವಾಗಿ ಯಾವುದೇ ವಕೀಲರು ಹಾಜರಾಗಬಾರದು ಮತ್ತು ಅವರನ್ನು ಪ್ರತಿನಿಧಿಸಲು ಮುಂದಾಗುವ ಯಾವುದೇ ವಕೀಲರಿಗೆ ಐದು ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು FBA ಸೋಮವಾರ ನಿರ್ಣಯವನ್ನು ಅಂಗೀಕರಿಸಿತ್ತು.
ಪ್ರಕರಣದ ಆರೋಪಿಗಳ ಬಗ್ಗೆ ತನಗೆ ಯಾವುದೇ ಸಹಾನುಭೂತಿ ಇಲ್ಲ. ಆದರೆ, ಅನೈತಿಕ ಮತ್ತು ಕಾನೂನುಬಾಹಿರವಾದ ಯಾವುದೇ ನಿಲುವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ VHP ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್, "ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಮತ್ತು ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ನಾಲ್ಕರಿಂದ ಐದು ತಿಂಗಳೊಳಗೆ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದಿದ್ದಾರೆ.
ತನ್ನ ನಿರ್ಣಯವನ್ನು ಮರುಪರಿಶೀಲಿಸುವಂತೆ ಬಾರ್ ಅಸೋಸಿಯೇಷನ್‌ಗೆ ಒತ್ತಾಯಿಸಿರುವ ಅವರು, "ನಿರ್ಣಯವು ಸಾಂವಿಧಾನಿಕ ತತ್ವಗಳನ್ನು ಮತ್ತು ವೃತ್ತಿಪರ ನೈತಿಕತೆಯನ್ನು ಉಲ್ಲಂಘಿಸುತ್ತದೆ. 2011ರ ಎ.ಎಸ್. ಮೊಹಮ್ಮದ್ ರಫಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪನ್ನು ಬಾರ್ ಅಸೋಸಿಯೇಷನ್ ಪರಿಗಣಿಸುತ್ತದೆ ಎಂದು ನಾನು ಆಶಿಸುತ್ತೇನೆ" ಎಂದು ಹೇಳಿದ್ದಾರೆ.
ನಿರ್ದಿಷ್ಟ ಆರೋಪಿಗಳನ್ನು ರಕ್ಷಿಸಲು ನಿರಾಕರಿಸುವ ಬಾರ್ ಅಸೋಸಿಯೇಷನ್‌ಗಳ ನಿರ್ಣಯಗಳು ಸಂಪೂರ್ಣವಾಗಿ ಕಾನೂನುಬಾಹಿರ, ಬಾರ್‌ನ ಸಂಪ್ರದಾಯಗಳಿಗೆ ಮತ್ತು ವೃತ್ತಿಪರ ನೈತಿಕತೆಗೆ ವಿರುದ್ಧವಾದದ್ದು ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಿಸಿದೆ ಎಂದು ತೀರ್ಪನ್ನು ಉಲ್ಲೇಖಿಸಿ ಕುಮಾರ್ ಹೇಳಿದ್ದಾರೆ.
