.
ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇದೀಗ 5ಕ್ಕೆ ಏರಿಕೆಯಾಗಿದೆ. ಇನ್ನುಳಿದ ಐವರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಶ್ವಾನದಳ, ಮೆಟಲ್ ಡಿಟೆಕ್ಟರ್ ಬಳಸಿ ಕಾರ್ಯಾಚರಣೆ ನಡೆಯುತ್ತಿದೆ.
ಕರ್ನಾಟಕದ ಗಡಿ ಚೆಕ್‌ಪೋಸ್ಟ್‌ನಿಂದ 51 ಕಿ.ಮೀ.ದೂರದ ಮೆಪ್ಪಾಡಿಯ (Meppady) ಮೀನಾಕ್ಷಿಪಾಲಂ ಸೇತುವೆ ಬಳಿಯ ಕಲ್ಲಾಡಿ ಎಂಬಲ್ಲಿ ಕೊಂಕಣ ರೈಲ್ವೇ ಕೆಳಗೆ ಸುರಂಗ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲೇ ದುರಂತ ಸಂಭವಿಸಿದೆ. ಕೆಸರು ಮಿಶ್ರಿತ ನೀರಿನ ಅಲೆಯಲ್ಲಿ ಹಲವರು ಸಿಲುಕಿಕೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ. ಈಗಾಗಲೇ ಹಲವರನ್ನು ರಕ್ಷಿಸಲಾಗಿದ್ದು, ಇನ್ನುಳಿದ ಐವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ವಯನಾಡು, ಕೋಝಿಕ್ಕೋಡ್, ಕಣ್ಣೂರಿನಿಂದ ಎನ್‌ಡಿಆರ್‌ಎಫ್ ತಂಡ, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳೀಯರು ಕೂಡ ಸಾಥ್ ನೀಡಿದ್ದಾರೆ. ಸದ್ಯ ಶ್ವಾನದಳ, ಮೆಟಲ್ ಡಿಟೆಕ್ಟರ್ ಬಳಸಿ ಕಾರ್ಯಾಚರಣೆ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಮೆಪ್ಪಾಡಿ ಎಸ್‌ಐಗೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೂ ನಾಳೆಯೂ (ಜು.8) ವಯನಾಡಿಗೆ ರೆಡ್ ಅಲರ್ಟ್ (Red Alert) ಘೋಷಿಸಲಾಗಿದ್ದು, ಜಿಲ್ಲೆಯ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದೆ. ಕೋಝಿಕ್ಕೋಡ್‌ನಲ್ಲೂ ನಾಳೆ ರೆಡ್ ಅಲರ್ಟ್ ನೀಡಲಾಗಿದ್ದು, ಮಲಪ್ಪುರಂ, ಕಾಸರಗೋಡು, ಕಣ್ಣೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
2024ರಲ್ಲಿ ಇದೇ ವಯನಾಡಿನ ಮೆಪ್ಪಾಡಿ ಗ್ರಾಮ ಪಂಚಾಯ್ತಿಯ ಮುಂಡಕ್ಕಾಯ್, ಚೂರಲ್ಮಲ, ವೆಲ್ಲಾರಿಮಲದಲ್ಲಿ ರಣಭೀಕರ ದುರಂತ ಸಂಭವಿಸಿದ್ದು, 250ಕ್ಕೂ ಹೆಚ್ಚು ಜನ ದುರ್ಮಣಕ್ಕೀಡಾಗಿದ್ದರು. ಇದೀಗ, ಅದೇ ಮೆಪ್ಪಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೇ ಭೂಕುಸಿತವಾಗಿದೆ. ಕಳೆದ ದುರಂತ ಸಂಭವಿಸಿದ್ದ ಕೇವಲ 12 ಕಿ.ಮೀ. ದೂರದಲ್ಲೇ ಈ ಭೂಕುಸಿತವಾಗಿದೆ.
