ಉಡುಪಿ: ಕುಕ್ಕೆಹಳ್ಳಿ ಈಶ್ವರನಗರದಲ್ಲಿರುವ ಸ್ವಾಮಿ ಕೊರಗಜ್ಜ ಕ್ಷೇತ್ರದ ವತಿಯಿಂದ ಈ ವರ್ಷದ ನವೆಂಬರ್ ತಿಂಗಳಿನಿಂದ 'ಆದಿ ಮಾಯೆ ಮೂಕಾಂಬಿಕಾ–ಸ್ವಾಮಿ ಕೊರಗಜ್ಜ ಕೃಪಾಪೋಷಿತ ಯಕ್ಷಗಾನ ಮಂಡಳಿ' ಆರಂಭಗೊಳ್ಳಲಿದೆ ಎಂದು ಮೇಳದ ಯಜಮಾನ ಡಾ. ಕೆ. ಕೃಷ್ಣ ಕುಲಾಲ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರವನ್ನು ಪ್ರಶ್ನಾ ಚಿಂತನೆಯ ಆಧಾರದಲ್ಲಿ 2019ರಲ್ಲಿ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠಾಪನೆ ಮಾಡಲಾಗಿದೆ. ಕಳೆದ ಏಳು ವರ್ಷಗಳಿಂದ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ತಮ್ಮ ಹರಕೆಗಳನ್ನು ಸಲ್ಲಿಸುತ್ತಿದ್ದು, ಕ್ಷೇತ್ರವು ಭಕ್ತರ ನಂಬಿಕೆಯ ಕೇಂದ್ರವಾಗಿ ಬೆಳೆದಿದೆ ಎಂದು ಹೇಳಿದರು.
ಆದಿ ಮಾಯೆ ಮೂಕಾಂಬಿಕಾ ದೇವಿ ಹಾಗೂ ಸ್ವಾಮಿ ಕೊರಗಜ್ಜ ದೈವದ ಅಪ್ಪಣೆಯಂತೆ ಆರಂಭವಾಗುತ್ತಿರುವ ಈ ಯಕ್ಷಗಾನ ಮೇಳದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟಿನ ಸಮ್ಮಿಲನ ಇರಲಿದೆ. ನುರಿತ ಹಾಗೂ ಅನುಭವಿ ಕಲಾವಿದರು, ಹೊಸ ವೇಷಭೂಷಣ, ಆಕರ್ಷಕ ರಂಗಸಜ್ಜಿಕೆ, ಪ್ರಸಿದ್ಧ ಹಿಮ್ಮೇಳದೊಂದಿಗೆ ಕ್ಷೇತ್ರದ ಮಹಿಮೆಯನ್ನು ಸಾರುವ ಪ್ರಸಂಗಗಳ ಜತೆಗೆ ಪೌರಾಣಿಕ ಹಾಗೂ ಸಾಮಾಜಿಕ ಕಥಾ ಪ್ರಸಂಗಗಳನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಕ್ಷೇತ್ರದ ಭಕ್ತರು ಹಾಗೂ ಯಕ್ಷಗಾನ ಕಲಾಪ್ರೇಮಿಗಳು ತಮ್ಮ ಊರುಗಳಲ್ಲಿ ಮೇಳದ ಪ್ರದರ್ಶನಗಳನ್ನು ಆಯೋಜಿಸಿ, ಕಲಾವಿದರನ್ನು ಪ್ರೋತ್ಸಾಹಿಸಿ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
