SIR ಮೊದಲ ಮತದಾರರ ಕರಡು ಪಟ್ಟಿ ಬಿಡುಗಡೆ; 1.07 ಕೋಟಿ ಮಂದಿ ಹೆಸರು ಡಿಲೀಟ್‌!

 

ಬೆಂಗಳೂರು: ಕರ್ನಾಟಕದಲ್ಲಿ ವಿಶೇಷ ತೀವ್ರ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮುಕ್ತಾಯಗೊಂಡಿದ್ದು ರಾಜ್ಯದಲ್ಲಿ ಬರೋಬ್ಬರಿ 1,07,96,339 ಮತದಾರರ ಹೆಸರು ಡಿಲೀಟ್ ಆಗಿದೆ.

ಇಂದು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು, ರಾಜ್ಯದಲ್ಲಿ 1 ಕೋಟಿ, 7 ಲಕ್ಷ ಮತದಾರರ ಹೆಸರು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದರು. 5,54,32,314 ಮತದಾರರ ಹೆಸರು ಉಳಿದುಕೊಂಡಿದೆ ಎಂದರು. ಶಾಶ್ವತವಾಗಿ ಸ್ಥಳಾಂತರವಾದವರ ಸಂಖ್ಯೆ 65,45,679 ಇದೆ. SIR ಪ್ರಕ್ರಿಯೆಯಲ್ಲಿ ಗೈರಾದವರ ಸಂಖ್ಯೆ 15,17,042. ಮೃತಪಟ್ಟ ಮತದಾರರ ಸಂಖ್ಯೆ 16,39,864 ಆಗಿದೆ. ಫಾರ್ಮ್ 6 ಬಳಸಿಕೊಂಡು ಮತದಾರರ ಪಟ್ಟಿಗೆ ಸೇರಬಹುದು ಎಂದು ಅನ್ಬುಕುಮಾರ್ ಹೇಳಿದರು. 

ಈ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಒಂದು ತಿಂಗಳು ಅಂದರೆ, ಸೆಪ್ಟೆಂಬರ್ 23ವರೆಗೂ ಕಾಲಾವಕಾಶ ನೀಡಲಾಗಿದೆ. ವಿವಿಧ ಕಾರಣಗಳಿಂದ ಡಿಲೀಟ್‌ ಆದವರು ಸಕಾರಣ ನೀಡಿ ಅಥವಾ ಫಾರಂ ನಂಬರ್ 6 ಅಥವಾ 8 ಅನ್ನು ಭರ್ತಿ ಮಾಡಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಲಿದೆ. ಈ ಬಗ್ಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ. 

ಮತದಾರರ ಹೆಸರು ಹುಡುಕುವುದು ಹೇಗೆ?

ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಅಲ್ಲಿ ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಂಡ ಕೂಡಲೇ ಕರಡು ಮತದಾರರ ಪಟ್ಟಿ ಸಿಗುತ್ತದೆ. ಅಲ್ಲಿ ಜಿಲ್ಲೆ, ವಿಧಾನಸಭಾ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಬೂತ್‌ ವಾರು ಮತದಾರರ ಪಟ್ಟಿ ಪಿಡಿಎಫ್‌ ಸಿಗುತ್ತದೆ. ಪಿಡಿಎಫ್‌ನಲ್ಲಿ ಹೆಸರು ಸರ್ಚ್‌ ಮಾಡಬಹುದು. ಒಂದು ವೇಳೆ ಬೂತ್‌ನಲ್ಲಿ ಹೆಸರು ಕೈಬಿಟ್ಟಿದ್ದರೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ( https://voters.eci.gov.in/download-eroll )