ಮುಂಬೈ: 12ನೇ ಶತಮಾನದಲ್ಲೇ ಜಗತ್ತಿಗೆ ಸಮ ಸಮಾಜದ ಪರಿಕಲ್ಪನೆಯನ್ನು ಸಾರಿದ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ಮುಂಬೈನಲ್ಲಿ ಸ್ಥಾಪಿಸುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಂಬೈನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾರಾಷ್ಟ್ರ ಘಟಕ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, “ಕಾಯಕವೇ ಕೈಲಾಸ” ಎಂಬ ಸಂದೇಶ ಸಾರಿದ ಬಸವಣ್ಣನವರು ಶ್ರೇಣಿರಹಿತ, ವರ್ಗರಹಿತ ಹಾಗೂ ಜಾತಿರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಇಂತಹ ಮಹಾನ್ ಸಮಾಜ ಸುಧಾರಕರ ಪುತ್ಥಳಿಯನ್ನು ಮುಂಬೈನಂತಹ ಮಹಾನಗರದಲ್ಲಿ ಸ್ಥಾಪಿಸುವುದು ಬಸವಣ್ಣನವರ ಚಿಂತನೆಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಬಸವಣ್ಣನವರು “ದಯವೇ ಧರ್ಮದ ಮೂಲವಯ್ಯ” ಎಂದು ಸಾರಿದ್ದರೆ, ರೇಣುಕಾದಿ ಆಚಾರ್ಯರು ಮಾನವಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಉದಾತ್ತ ಸಂದೇಶ ನೀಡಿದ್ದಾರೆ. ಇಂತಹ ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಮಹಾನ್ ಪರಂಪರೆ ನಮ್ಮದು ಎಂದು ಈಶ್ವರ ಖಂಡ್ರೆ ಹೇಳಿದರು.
1904ರಲ್ಲಿ ಸ್ಥಾಪನೆಯಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ವೀರಶೈವ-ಲಿಂಗಾಯತ ಸಮಾಜದವರನ್ನು ಒಗ್ಗೂಡಿಸುವ ಮಹತ್ವದ ಕಾರ್ಯ ಮಾಡುತ್ತಿದೆ. ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ; ನಾವೆಲ್ಲರೂ ಒಂದೇ ಸಮಾಜದವರು, ಭಗವಂತ ಪರಶಿವ ನಮ್ಮೆಲ್ಲರ ತಂದೆ ಎಂದು ಅವರು ಹೇಳಿದರು.
ಕೆಲವು ಶಕ್ತಿಗಳು ವೀರಶೈವ ಬೇರೆ, ಲಿಂಗಾಯತ ಬೇರೆ ಎಂದು ಸಮಾಜದಲ್ಲಿ ವಿಭಜನೆಯ ಭಾವನೆ ಮೂಡಿಸಲು ಪ್ರಯತ್ನಿಸುತ್ತಿವೆ. ಆದರೆ ಯಾವುದೇ ವ್ಯಕ್ತಿ ಅಥವಾ ಶಕ್ತಿಯಿಂದ ನಮ್ಮ ಸಮಾಜವನ್ನು ಒಡೆಯಲು ಸಾಧ್ಯವಿಲ್ಲ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ತಮ್ಮ ತಂದೆ ಲಿಂಗೈಕ್ಯ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರು ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಂಘಟನೆ ನಡೆಸಿ ಸಮಾಜದ ಜನರನ್ನು ಒಗ್ಗೂಡಿಸಿದ ಕಾರ್ಯವನ್ನು ಸ್ಮರಿಸಿದರು.
ಬಸವ ಪುತ್ಥಳಿ ಸ್ಥಾಪನೆಗೆ ಸ್ಪೀಕರ್ ಸಕಾರಾತ್ಮಕ ಸ್ಪಂದನೆ
ಈಶ್ವರ ಖಂಡ್ರೆ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಹಾರಾಷ್ಟ್ರ ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್, ಮುಂಬೈನಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪಿಸುವ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್, ಮಾಜಿ ಶಾಸಕ ಅಶೋಕ್ ಖೇಣಿ, ಬಸವ ಸಮಿತಿಯ ಅರವಿಂದ ಜತ್ತಿ, ಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ, ಪದ್ಮ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಕೋರೆ, ಮಾಜಿ ಮೇಯರ್ ಶರಣು ಮೋದಿ, ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
