ರಾಜಕೀಯ ಲಾಭಕ್ಕಾಗಿ ಬಿಜೆಪಿ ನಿರಪರಾಧಿಯ ಬಲಿ ಪಡೆದಿದೆ: ನಾಗೇಂದ್ರ ರಾಜೀನಾಮೆ ಕುರಿತು ಡಿಕೆಶಿ ಪ್ರತಿಕ್ರಿಯೆ

ಮೈಸೂರು: ಸಚಿವ ನಾಗೇಂದ್ರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್,  ಬಿಜೆಪಿ (BJP) ತಮ್ಮ ರಾಜಕೀಯಕ್ಕಾಗಿ ನಿರಪರಾಧಿಯನ್ನ ಬಲಿ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ನಾಗೇಂದ್ರ ರಾಜೀನಾಮೆ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ತಪ್ಪು ಮಾಡದೇ ಇದ್ದರೂ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ನಾಗೇಂದ್ರ ರಾಜೀನಾಮೆ ನಂತರವೂ ಬಿಜೆಪಿಯವರು ಪಾದಯಾತ್ರೆ ಮಾಡುವುದಾದರೆ ಮಾಡಲಿ. ಅವರಿಗೆ ರಾಜಕೀಯ ಬೇಕು, ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ನನ್ನ ಒಂದೇ ಒಂದು ಪ್ರಶ್ನೆಗೆ ಬಿಜೆಪಿಯವರು ಉತ್ತರ ಕೊಡಲಿಲ್ಲ. ಯಾವ ಕಾರಣಕ್ಕಾಗಿ ನಾಗೇಂದ್ರ ರಾಜೀನಾಮೆ ಕೇಳಿದರು ಎಂಬುದಕ್ಕೆ ಬಿಜೆಪಿಯವರು ಉತ್ತರ ಕೊಡಲಿ ಎಂದರು. 

ಡಿ.ಕೆ ವಿಧಾನಸೌಧ ಮಾರುತ್ತಾರೆ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಯರ‍್ಯಾರು ಏನೇನು ಮಾರಲು ಹೊರಟಿದ್ದರು ಎಂಬ ಚರಿತ್ರೆ ಬಿಚ್ಚಿಟ್ಟರೆ ಎಲ್ಲವೂ ಬಯಲಾಗುತ್ತದೆ. ನಾನು ಸದ್ಯಕ್ಕೆ ಆ ತಂಟೆಗೆ ಹೋಗುವುದಿಲ್ಲ. ಕುಮಾರಸ್ವಾಮಿಗೆ ಬಾಯಿ ಚಪಲ. ಚಪಲಕ್ಕೆ ಮಾತನಾಡಿ ಖುಷಿ ಪಡಲಿ ಬಿಡಿ. ಇನ್ನೂ ನನ್ನ ಬಗ್ಗೆ ಟೀಕೆ ಮಾಡಲಿ. ಅಸೂಯೆಗೆ ಮದ್ದಿಲ್ಲ, ನಾನು ಸಿಎಂ ಆಗಿರುವುದು ಕೆಲವರಿಗೆ ಅಸೂಯೆ ತಂದಿದೆ. ಕುಮಾರಸ್ವಾಮಿ ಮಾತ್ರ ಅಲ್ಲ ಬಿಜೆಪಿ ಜೊತೆಗೆ ಎನ್‌ಡಿಎ ಇಡೀ ಕೂಟಕ್ಕೆ ನಾನು ಸಿಎಂ ಆಗಿರುವುದು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಏನೇನೊ ಮಾತನಾಡುತ್ತಿದ್ದಾರೆ ಮಾತನಾಡಲಿ. ಆದರೆ ಒಂದು ಸತ್ಯ ಟೀಕೆಗಳು ಸಾಯುತ್ತವೆ, ಮಾಡಿದ ಕೆಲಸ ಉಳಿಯುತ್ತದೆ. ಇದನ್ನ ನಂಬಿದವನು ನಾನು ಎಂದು ತಿರುಗೇಟು ನೀಡಿದರು. 

ಹನೂರು ಶೂಟೌಟ್ ವಿಚಾರವಾಗಿ ಮಾತನಾಡಿದ ಅವರು, ತನಿಖಾ ವರದಿ ನಮ್ಮ ಕೈ ಸೇರಿದೆ. ಇಡೀ ಪ್ರಕರಣವನ್ನು ಸಿಐಡಿಗೆ ವಹಿಸಿದ್ದೇವೆ. ತನಿಖೆ ನಡೆಯುತ್ತಿದೆ. ಈಗ ಬಂದಿರುವ ತನಿಖಾ ವರದಿಯಲ್ಲಿ ಹಲವು ಅಂಶಗಳು ಇವೆ. ಅವರು ಹತ್ತಿರದಿಂದ ಶೂಟ್ ಮಾಡಿರುವ ಬಗ್ಗೆ ಪ್ರಸ್ತಾಪ ಇದೆ. ಅವರ ಬಳಿ ಏನೇನು ವಸ್ತುಗಳು ಇತ್ತು, ಕಾಡಿಗೆ ಯಾವ ಕಾರಣಕ್ಕೆ ಹೋದರು ಎಂಬ ಬಗ್ಗೆ ಪ್ರಸ್ತಾಪ ಇದೆ. ಸಿಐಡಿ ತನಿಖೆ ಮುಗಿಯಲಿ ಎಲ್ಲವೂ ಬಹಿರಂಗವಾಗುತ್ತದೆ ಎಂದು ಹೇಳಿದರು.