ಬೆಂಗಳೂರು: ಕದ್ದ ಹಣದಲ್ಲೇ ಬಡವರಿಗೆ ನೆರವಾಗಿ, ಸ್ನೇಹಿತರಿಗೆ ಗ್ರಾಂಡ್ ಪಾರ್ಟಿ ನೀಡುತ್ತಿದ್ದ ಖತರ್ನಾಕ್ ಮನೆಗಳ್ಳ ಶಿವರಸನ್ (34) ಎಂಬಾತನನ್ನು ನಗರದ (Bengaluru) ಬೇಗೂರು ಪೊಲೀಸರು ಬಂಧಿಸಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ವಾಸವಿದ್ದ ಈತ, ಬೆಳಗಿನ ಜಾವ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಬಂಧಿತನಿಂದ 8 ಮನೆಗಳ್ಳತನ ಪ್ರಕರಣ ಭೇದಿಸಲಾಗಿದ್ದು, ಚಿನ್ನ-ಬೆಳ್ಳಿ ಸೇರಿದಂತೆ 36 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನ್ನನ್ನು ತಾನು ಚಿತ್ರ ಕಲಾವಿದ ಎಂದು ಹೇಳಿಕೊಳ್ಳುವ ಶಿವರಸನ್, 2018ರಲ್ಲಿ ಮೊದಲ ಬಾರಿಗೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನ ಹಾಕಲು ಆರಂಭಿಸಿದ್ದ. ಅಂದಿನಿಂದ ಇಲ್ಲಿಯವರೆಗೂ ನಗರದ ಹಲವು ಭಾಗಗಳಲ್ಲಿ ಕಳ್ಳತನ ಎಸಗಿದ್ದಾನೆ. ಪರಿಣಾಮ ಈ ಮುಂಚೆ 13 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಹಲವು ಬಾರಿ ಜೈಲು ಸೇರಿ ಜಾಮೀನಿನ ಪಡೆದು ವಾಪಸ್ ಬಂದ ಬಳಿಕ ಪುನಃ ತನ್ನ ಹಳೆಯ ಕಸುಬು ಮುಂದುವರಿಸುತ್ತಿದ್ದ ಎನ್ನಲಾಗಿದೆ.
ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ''ನಾನು ಕಳವು ಮಾಡಿದ ಆಭರಣಗಳನ್ನು ಮಾರಾಟ ಮಾಡಿದ ಹಣದಲ್ಲಿ ಬಡವರಿಗೆ ದಾನ ಮಾಡುತ್ತೇನೆ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇನೆ'' ಎಂದು ಹೇಳುತ್ತಿದ್ದ. ಆದರೆ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ದಾನ- ಧರ್ಮ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ನ್ಯಾಯಾಲಯಗಳು ನೀಡಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
