ಯಲಹಂಕದ ಮನೆಯಲ್ಲಿ ನೇಪಾಳಿ ಗ್ಯಾಂಗ್ ನಿಂದ ಬರೋಬ್ಬರಿ 1 ಕೆಜಿ ಚಿನ್ನಾಭರಣ ಕಳ್ಳತನ; ನಾಲ್ವರ ಬಂಧನ; ಪ್ರಮುಖ ಆರೋಪಿಗಳಿಬ್ಬರು ಎಸ್ಕೇಪ್ !

ಬೆಂಗಳೂರು: ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟಿಗೆನಹಳ್ಳಿಯಲ್ಲಿ ನೇಪಾಳಿ ಗ್ಯಾಂಗ್ ಕೈಚಳಕ ತೋರಿದ್ದು, ಚಂದ್ರಮೌಳಿ ಎಂಬ ಖಾಸಗಿ ಕಂಪನಿ ಉದ್ಯೋಗಿ ಮನೆಯಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನಾಭರಣ ಕಳ್ಳತನ ನಡೆಸಿದೆ. ಆರೋಪಿಗಳು ಸೆಕ್ಯೂರಿಟಿ ಗಾರ್ಡ್​​ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಆರೋಪಿಗಳಾದ ಧೀರೇಂದ್ರ ಪ್ರೇಮ್, ಅಭಿಷೇಕ್, ಅಂಬರೆ ಧಮೈ ಹಾಗೂ ದೀಪಕ್ ಶಾಹಿ ಎಂಬವರನ್ನು ಬಂಧಿಸಲಾಗಿದೆ. ಮತ್ತಿಬ್ಬರು ಪ್ರಮುಖ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.

ಕಳ್ಳತನಕ್ಕೆ 6 ತಿಂಗಳಿನಿಂದ ಪ್ಲ್ಯಾನ್

ಚಂದ್ರಮೌಳಿ ಅವರ ಮನೆಯಲ್ಲಿ ಕಳ್ಳತನ ನಡೆಸಲು ನೇಪಾಳಿ ಗ್ಯಾಂಗ್​​ ಬರೋಬ್ಬರಿ 6 ತಿಂಗಳಿನಿಂದ ಪ್ಲ್ಯಾನ್​​ ಮಾಡಿತ್ತು. ಪ್ರಮುಖ ಆರೋಪಿ ಸಂಜಯ್ ಮತ್ತು ಆತನ ಪತ್ನಿ ಚಂದ್ರಮೌಳಿ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಕಳೆದ ವರ್ಷ ಚಂದ್ರಮೌಳಿ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ ವೇಳೆ ಚಿನ್ನಾಭರಣಗಳು ಪ್ರಮುಖ ಆರೋಪಿ ಸಂಜಯ್ ಪತ್ನಿ ಕಣ್ಣಿಗೆ ಬಿದ್ದಿದ್ದವು. ಆ ಬಳಿಕ ಕಳೆದ ಆಗಸ್ಟ್ 16ರಂದು ಚಂದ್ರಮೌಳಿ ಮನೆಯವರು ಸಂಬಂಧಿಯ ತಿಥಿ ಕಾರ್ಯಕ್ಕೆಂದು ಹೋಗಿದ್ದರು. ತಿಥಿಗೆ ಹೋಗುತ್ತಿರುವ ಕಾರಣ ಚಿನ್ನಾಭರಣ ಹಾಕಿಕೊಂಡು ಹೋಗಿರಲಿಲ್ಲ. ಇದೇ ಸಮಯ ನೋಡಿಕೊಂಡು ರಾತ್ರಿ 2 ಗಂಟೆ ಸುಮಾರಿಗೆ ಸಂಜಯ್ ಚಿನ್ನಾಭರಣ ಕಳ್ಳತನ ಮಾಡಿದ್ದ. ಕಳ್ಳತನದ ಬಳಿಕ ಸಂಬಂಧಿಕರ ಬಳಿ ಚಿನ್ನ ಕೊಟ್ಟು ಬೆಳಿಗ್ಗೆ ವಿಮಾನದಲ್ಲಿ ದಂಪತಿ ಎಸ್ಕೇಪ್ ಆಗಿದ್ದರು ಎನ್ನಲಾಗಿದೆ.

ಇತ್ತ ಉಳಿದ ಆರೋಪಿಗಳುಚಿನ್ನಾಭರಣದೊಂದಿದೆ ಬಸ್ ಹತ್ತಿ ಹೊರಟಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ಪೊಲೀಸರು ಫೇಸ್​​ಬುಕ್ ಮೂಲಕ ಆರೋಪಿಗಳ ಸುಳಿವು ಪತ್ತೆ ಮಾಡಿದ್ದು, ಅಷ್ಟೊತ್ತಿಗಾಗಲೇ ಅವರೆಲ್ಲ ನೇಪಾಳ ಬಾರ್ಡರ್ ತಲುಪಿದ್ದರು. ತಕ್ಷಣ SSBಗೆ( ಶಶಸ್ತ್ರ ಸೀಮಾ ಬಾಲ) ಯಲಹಂಕ ಪೊಲೀಸರು ಮಾಹಿತಿ ನೀಡಿದ್ದು, ಅವರು ಆರೋಪಿಗಳಿದ್ದ ಬಸ್​​ ತಡೆದು ನಿಲ್ಲಿಸಿದ್ದರು. ವಿಮಾನದಲ್ಲಿ ತೆರಳಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಬಂಧಿತ ಆರೋಪಿಗಳಿಂದ 55 ಲಕ್ಷ ಮೌಲ್ಯದ 360 ಗ್ರಾಂ ಚಿನ್ನ, 960 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ಸಂಜಯ್ ಮತ್ತು ಆತನ‌ ಪತ್ನಿಗಾಗಿ ಹುಡುಕಾಟ ಮುಂದುವರಿದಿದೆ.

ಇನ್ನು ಈ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಂಜಯ್​​ ಕ್ರೈಂ ಹಿನ್ನೆಲೆ ಹೊಂದಿದ್ದಾನೆ ಎಂಬುದೂ ತನಿಖೆ ವೇಳೆ ಬಯಲಾಗಿದೆ. ಈ ಹಿಂದೆ ಕೂಡ 2021ರಲ್ಲಿ ಕೆಜಿ ಹಳ್ಳಿ ಪೊಲೀಸರಿಂದ ಮನೆಗಳ್ಳತನ ಕೇಸ್​​ ಸಂಬಂಧ ಈತ ಅರೆಸ್ಟ್ ಆಗಿದ್ದ. ಜೈಲಿಗೆ ಹೋಗಿ ಹೊರಬಂದು ಬುದ್ಧಿ ಕಲಿಯದೆ ಮತ್ತೆ ಅಂತಹುದ್ದೇ ಕೆಲಸ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.