ಬೆಂಗಳೂರು: ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಸರ್ವೆ ಕಾರ್ಯಕ್ಕೆ ಸರ್ಕಾರ ಇನ್ನೊಂದು ತಿಂಗಳು ಗಡುವು (Deadline) ವಿಸ್ತರಿಸಿದೆ.
ಬೆಸ್ಕಾಂ ಎಂಡಿ ಶಿವಶಂಕರ್ ಅವರು ಈ ಮಾಹಿತಿ ನೀಡಿದ್ದಾರೆ. ಜುಲೈ 1 ರಿಂದ ಆರಂಭವಾದ ಈ ಸರ್ವೆ ಕಾರ್ಯವು ಮೂಲತಃ ಆಗಸ್ಟ್ 31 ರವರೆಗೆ ನಡೆಯಬೇಕಿತ್ತು. ಆದರೆ ಫಲಾನುಭವಿಗಳಿಂದ ಸರಿಯಾದ ಪ್ರತಿಕ್ರಿಯೆ ಸಿಗದ ಕಾರಣ ಸರ್ಕಾರವು ಸೆಪ್ಟೆಂಬರ್ 30 ರವರೆಗೆ ಅವಧಿ ಹೆಚ್ಚಿಸಿದೆ.
ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಗ್ರಾಹಕರ ಮಾಹಿತಿಯನ್ನು ನವೀಕರಿಸುವ ಕಾರ್ಯವು ರಾಜ್ಯದ ಎಲ್ಲಾ ಎಸ್ಕಾಂಗಳಲ್ಲಿ ಮುಂದುವರೆದಿದೆ. ಬೆಸ್ಕಾಂ ಸೇರಿದಂತೆ ಇತರ ಎಸ್ಕಾಂಗಳ ವ್ಯಾಪ್ತಿಯಲ್ಲಿ ಪ್ರತಿದಿನ ಸಿಬ್ಬಂದಿಗಳು ಮನೆ ಮನೆಗೆ ಹೋಗಿ ಸರ್ವೆ ನಡೆಸುತ್ತಿದ್ದಾರೆ. ಈಗಾಗಲೇ ಸುಮಾರು 70 ಪ್ರತಿಶತ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಆದರೆ ಉಳಿದ 30 ಪ್ರತಿಶತ ಕಾರ್ಯ ಇನ್ನೂ ಬಾಕಿ ಇದೆ.
ಗೃಹಜ್ಯೋತಿ ಫಲಾನುಭವಿಗಳು ಸರಿಯಾಗಿ ಸ್ಪಂದಿಸದ ಹಿನ್ನಲೆಯಲ್ಲಿ ಈ ವಿಳಂಬವಾಗಿದೆ ಎನ್ನಲಾಗಿದೆ. ಸಿಬ್ಬಂದಿ ಗ್ರಾಹಕರ ಮನೆಗಳಿಗೆ ಹೋದರೂ ಮನೆ ಮಾಲೀಕರು ಸಿಗದ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಸಿಬ್ಬಂದಿ ‘ಡೋರ್ ಲಾಕ್’ ಆಯ್ಕೆಯನ್ನು ಬಳಸಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಅಕೌಂಟ್ ಐಡಿ ನಮೂದಿಸಿದರೆ ಸಿಬ್ಬಂದಿಯ ಸಂಪರ್ಕ ಸಂಖ್ಯೆಯೊಂದಿಗೆ ಮೆಸೇಜ್ ರವಾನೆಯಾಗುತ್ತದೆ. ಇದರಿಂದ ಗ್ರಾಹಕರು ನಂತರ ಸಂಪರ್ಕಿಸಿ ಮಾಹಿತಿ ನೀಡಬಹುದು.
