ಮುಂಬೈ: ರಕ್ಷಾ ಬಂಧನದ ಜಾಹೀರಾತು ಒಂದರಲ್ಲಿ ಧರಿಸಿದ್ದ ಬಟ್ಟೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಇದೀಗ ನಟಿ ಕೃತಿ ಸನೋನ್ ಗ್ ನೀಡಿದ್ದಾರೆ. ನಿಜವಾದ ಸಂಸ್ಕೃತಿ ಹಾಗೂ ಸಂಪ್ರದಾಯ ಹಾಕುವ ಬಟ್ಟೆಯಲ್ಲಲ್ಲ, ಹೃದಯದಲ್ಲಿರುತ್ತದೆ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ ನಟಿ, ನಿಜವಾದ ಸಂಸ್ಕೃತಿ ಮತ್ತು ಸಂಪ್ರದಾಯ ಇರುವುದು ಕೇವಲ ಬಟ್ಟೆಯಲಲ್ಲ, ಬದಲಿಗೆ ಅವಳ ಹೃದಯದಲ್ಲಿ ಮತ್ತು ಆಚಾರ-ವಿಚಾರಗಳಲ್ಲಿ. ಧರಿಸುವ ಉಡುಪಿನಿಂದ ಯಾರ ವ್ಯಕ್ತಿತ್ವವನ್ನೂ ಅಥವಾ ಸಂಸ್ಕಾರವನ್ನೂ ಅಳೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಹಬ್ಬದ ನಿಜವಾದ ಅರ್ಥ ನಾವು ಹಾಕುವ ಬಟ್ಟೆಗಳಲ್ಲಿಲ್ಲ, ಬದಲಾಗಿ ಸಂಪ್ರದಾಯಗಳ ಬಗ್ಗೆ ನಾವು ಹೊಂದಿರುವ ಭಾವನೆಗಳಲ್ಲಿದೆ. ರಕ್ಷಾ ಬಂಧನವೆಂಬುದು ರಕ್ಷಣೆಗಾಗಿರುವ ಒಂದು ಬಂಧ ಎಂದರ್ಥ. ನಾನು ಮತ್ತು ನನ್ನ ಸಹೋದರಿ ಪರಸ್ಪರ ರಾಖಿ ಕಟ್ಟಿಕೊಳ್ಳುತ್ತೇವೆ. ಒಬ್ಬ ಸಹೋದರ ಮಾಡುವುದಕ್ಕಿಂತ ಹೆಚ್ಚಾಗಿ ನಾವು ಒಬ್ಬರನ್ನೊಬ್ಬರು ರಕ್ಷಿಸಬಲ್ಲೆವು. ನಾವಿಬ್ಬರು ಕೂಡ ಪರಸ್ಪರ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ. ನಮ್ಮ ಈ ಪ್ರಾರ್ಥನೆ ಮತ್ತು ಭರವಸೆ ಕೇವಲ ನಮಗಲ್ಲ, ನಮ್ಮ ನಾಯಿಗಳಿಗೂ ಅನ್ವಯಿಸುತ್ತದೆ. ಯಾಕೆಂದರೆ, ಅವುಗಳು ಕೂಡ ನಮ್ಮ ಕುಟುಂಬದ ಸದಸ್ಯರೇ.
ಮಹಿಳೆಯರು ಏನು ಧರಿಸಬೇಕು ಎಂದು ಹೇಳುವುದನ್ನು ನಾವು ಯಾವಾಗ ನಿಲ್ಲಿಸುತ್ತೇವೆ? ಸಾಂಪ್ರದಾಯಿಕ ಉಡುಪುಗಳ ಶೈಲಿ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದ್ದರೂ, ಇಂದಿಗೂ ಒಬ್ಬ ಮಹಿಳೆಯ ಸಂಸ್ಕೃತಿ ಮತ್ತು ಗೌರವವನ್ನು ಕೇವಲ ಅವಳ ಬಟ್ಟೆಯಿಂದಲೇ ಅಳಿಯುವ ಕೆಟ್ಟ ಮನಸ್ಥಿತಿ ನಮ್ಮ ಸಮಾಜದಲ್ಲಿದೆ. ಆದರೆ ನಿಜವಾದ ಸಂಸ್ಕೃತಿ ಮತ್ತು ಸಂಪ್ರದಾಯ ಇರುವುದು ಕೇವಲ ಬಟ್ಟೆಯಲಲ್ಲ, ಬದಲಿಗೆ ಅವಳ ಹೃದಯದಲ್ಲಿ ಮತ್ತು ಆಚಾರ-ವಿಚಾರಗಳಲ್ಲಿ. ಧರಿಸುವ ಉಡುಪಿನಿಂದ ಯಾರ ವ್ಯಕ್ತಿತ್ವವನ್ನೂ ಅಥವಾ ಸಂಸ್ಕಾರವನ್ನೂ ಅಳೆಯಲು ಸಾಧ್ಯವಿಲ್ಲ.
ಬಿಕಿನಿ ಧರಿಸಿ ರಾಖಿ ಕಟ್ಟುವ ಅವಶ್ಯಕತೆ ಏನಿತ್ತು ಎಂದಿದ್ದ ಕಂಗನಾ
ಕೃತಿ ಸನೋನ್ ಇತ್ತೀಚೆಗೆ ಆಭರಣ ಬ್ರ್ಯಾಂಡ್ ಒಂದರ ರಕ್ಷಾ ಬಂಧನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಲ್ಲಿ ಹಬ್ಬವನ್ನು ಆಚರಿಸುವ ವೇಳೆ ನಟಿ ಆಫ್-ವೈಟ್ ಬ್ರಾಲೆಟ್ ಶೈಲಿಯ ಬ್ಲೌಸ್ ಜೊತೆಗೆ ಕೇಪ್ ಮತ್ತು ಡ್ರೇಪ್ಡ್ ಸ್ಕರ್ಟ್ ಧರಿಸಿದ್ದರು. ಅಲ್ಲದೇ ಬಟ್ಟೆಯ ಆಯ್ಕೆಯ ಹೊರತಾಗಿ, ಈ ಜಾಹೀರಾತಿನಲ್ಲಿ ನಾಯಿಗೆ ರಾಖಿ ಕಟ್ಟುತ್ತಿರುವುದಕ್ಕಾಗಿ ಆನ್‌ಲೈನ್‌ನಲ್ಲಿ ಟೀಕೆಗೆ ಗುರಿಯಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಕೂಡ ವಿವಾದದ ಕುರಿತು ಕೆಂಡಕಾರಿದ್ದರು.
ಮಹಿಳೆಯರಾಗಲು ಇದು ಒಳ್ಳೆಯ ಕಾಲ, ಯಾಕಂದ್ರೆ ನಮ್ಮ ವಾರ್ಡ್‌ರೋಬ್‌ಗಳು ವಿವಿಧ ರೀತಿಯ ಬಟ್ಟೆಗಳಿಂದ ತುಂಬಿವೆ. ಇಂದಿನ ಜಾಗತಿಕ ಮಹಿಳೆಯರ ಬಳಿ ಕಾಕ್ಟೈಲ್ ಡ್ರೆಸ್‌ನಿಂದ ಲೆಹೆಂಗಾ, ಜೀನ್ಸ್‌ನಿಂದ ಸೀರೆ, ಬಿಕಿನಿಯಿಂದ ಸಲ್ವಾರ್‌ವರೆಗೆ ಹತ್ತು ಹಲವಾರು ಆಯ್ಕೆಗಳಿವೆ. ಇಷ್ಟೆಲ್ಲ ಅವಕಾಶಗಳಿರುವಾಗ, ಸಹೋದರನಿಗೆ ರಾಖಿ ಕಟ್ಟುವಾಗ ಬಿಕಿನಿ ಅಥವಾ ಒಳಉಡುಪು ಧರಿಸುವ ಅವಶ್ಯಕತೆ ಏನಿತ್ತು? ನಿಮ್ಮ ಬಟ್ಟೆಯ ಆಯ್ಕೆಗಳೆಲ್ಲ ಎಲ್ಲಿಗೆ ಹೋದವು? ಎಂದು ಕಂಗನಾ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಜಾಹೀರಾತು ಉದ್ದೇಶಪೂರ್ವಕವಾಗಿ ಅಸಹ್ಯ ಹುಟ್ಟಿಸುವಂತಿದೆ ಎಂದಿದ್ದರು.
