ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ದಿಢೀರ್ ನಿವೃತ್ತಿ ಘೋಷಿಸಿದ ಅರ್ಜೆಂಟೀನಾ ಫುಟ್ಬಾಲ್ ನ ದಂತಕತೆ ಲಿಯೋನೆಲ್ ಮೆಸ್ಸಿ

ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ನಲ್ಲಿ ನಿರಾಸೆ ಅನುಭವಿಸಿದರೂ ಅರ್ಜೆಂಟೀನಾ ಫುಟ್ಬಾಲ್ ನ ದಂತಕತೆ ಲಿಯೋನೆಲ್ ಮೆಸ್ಸಿ ಇನ್ನೂಕೆಲಕಾಲ ಅಂತಾರಾಷ್ಟ್ರೀಯ ಫುಟ್ಬಾಲ್ ನಲ್ಲಿ ಮುಂದುವರಿಯುತ್ತಾರೆಂಬ ಅಭಿಮಾನಿಗಳ ನಿರೀಕ್ಷೆ ಇದೀಗ ಹುಸಿಯಾಗಿದೆ. ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ದಿಢೀರ್ ನಿವೃತ್ತಿ ಘೋಷಿಸುವ ಮೂಲಕ ಅವರು ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಸ್ಪೇನ್ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಬಳಿಕ ಮೌನಕ್ಕೆ ಜಾರಿದ್ದ ಅವರು ಇದೀಗ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಮೆಸ್ಸಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಅಕ್ಟೋಬರ್ 31ರಂದು ತಮ್ಮ ಸುದೀರ್ಘ ಹಾಗೂ ಭಾವುಕ ವಿದಾಯದ ಸಂದೇಶವನ್ನು ಹಂಚಿಕೊಂಡಿರುವ 39 ವರ್ಷದ ಮೆಸ್ಸಿ, "ಫೈನಲ್ ಪಂದ್ಯ ಮುಗಿದ ನಂತರ ಸಾಕಷ್ಟು ಆಲೋಚಿಸಿ ಈ ಮಹತ್ವದ ನಿರ್ಧಾರಕ್ಕೆ ಬಂದಿದ್ದೇನೆ. ನಾನು ರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳುತ್ತಿದ್ದೇನೆ. ಈ ನಿರ್ಧಾರ ನನಗೆ ತೀವ್ರ ನೋವುಂಟುಮಾಡಿದೆ, ಆದರೂ ಈ ನಿರ್ಧಾರಕ್ಕೆ ಇದುವೇ ಸರಿಯಾದ ಸಮಯ ಎಂಬುದು ನನ್ನ ಭಾವನೆ. ಈ ಬಣ್ಣದ ಜೆರ್ಸಿಗಾಗಿ ನಾನು ನನ್ನ ಶೇಕಡಾ 100 ರಷ್ಟು ಶ್ರಮ ಹಾಕಿದ್ದೇನೆ" ಎಂದು ಬರೆದಿದ್ದಾರೆ.

"ಸುಮಾರು 20 ವರ್ಷಗಳ ಈ ಸುದೀರ್ಘ ಪಯಣದಲ್ಲಿ ಪ್ರೀತಿ ಮತ್ತು ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಮೈದಾನದಲ್ಲಿ ನಿಮ್ಮ ಪ್ರೋತ್ಸಾಹದ ಧ್ವನಿಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇನೆ. ಇನ್ಮುಂದೆ ನಾನು ಕೂಡ ಮೈದಾನದ ಹೊರಗಿದ್ದುಕೊಂಡೇ ಅರ್ಜೆಂಟೀನಾ ತಂಡವನ್ನು ಬೆಂಬಲಿಸುವ ಪ್ರೇಕ್ಷಕನಾಗಲಿದ್ದೇನೆ. ತಂಡದಲ್ಲಿ ಹಲವು ಪ್ರತಿಭಾವಂತ ಯುವ ಆಟಗಾರರು ಹೊರಹೊಮ್ಮುತ್ತಿದ್ದು, ಅವರಿಗೆ ಅವಕಾಶಗಳು ಸಿಗಬೇಕಿದೆ," ಎಂದು ಮೆಸ್ಸಿ ಉಲ್ಲೇಖಿಸಿದ್ದಾರೆ.

ವಿಶ್ವಕಪ್ ಸೋಲಿನ ನೋವಿನ ನಡುವೆಯೇ ತಂದೆಯ ಆರೋಗ್ಯದಲ್ಲಾದ ಏರುಪೇರಿನ ಘಟನೆಯೂ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಮೆಸ್ಸಿ ಸ್ಪಷ್ಟಪಡಿಸಿದ್ದಾರೆ. 2022ರ ಫಿಫಾ ವಿಶ್ವಕಪ್ ಸೇರಿದಂತೆ ಅರ್ಜೆಂಟೀನಾಗೆ ಸಾಲು ಸಾಲು ಐತಿಹಾಸಿಕ ಗೆಲುವುಗಳನ್ನು ತಂದುಕೊಟ್ಟಿದ್ದ ಮೆಸ್ಸಿ ಅವರ ನಿವೃತ್ತಿಯೊಂದಿಗೆ, ಅರ್ಜೆಂಟೀನಾ ಫುಟ್ಬಾಲ್ ನ ಸ್ವರ್ಣಯುಗದ ಒಂದು ಸುಂದರ ಅಧ್ಯಾಯ ಅಂತ್ಯಗೊಂಡಂತಾಗಿದೆ.

ಈ ಬಾರಿ ಅಮೆರಿಕದಲ್ಲಿ ನಡೆದ ಫಿಫಾ ಫುಟ್ಬಾಲ್ ಟೂರ್ವಿಯ ಫೈನಲ್ ನಲ್ಲಿ ಸೋತಾಗ ಅತ್ತಿದ್ದ ಮೆಸ್ಸಿ

ಈ ಬಾರಿ ಅಮೆರಿಕದಲ್ಲಿ ನಡೆದ ಫಿಫಾ ಫುಟ್ಬಾಲ್ ಟೂರ್ವಿಯನ್ನು ಸತತ ಎರಡನೇ ಬಾರಿ ಗೆಲ್ಲುವ ಮೂಲಕ ಅರ್ಜೆಂಟೀನಾ ವಿಶ್ವಕಪ್ ಗಲ್ಲಬಹುದು. ಜೊತೆಗೆ ಈ ಕ್ಷಣದಲ್ಲೇ ಮೆಸ್ಸಿ ಅವರು ಫುಟ್ಬಾಲ್ ಗೆ ವಿದಾಯ ಹೇಳಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಫೈನಲ್ ಪಂದ್ಯ ಸೋತಿದ್ದರಿಂದ ಅವರು ಭಾವುಕರಾಗಿ ಅತ್ತಿದ್ದರು. ಈ ಸಂದರ್ಭ ದುಃಖಗೊಂಡಿದ್ದ ಅವರ ಅಭಿಮಾನಿಗಳು ಇದೀಗ ಮತ್ತೊಮ್ಮೆ ಬೇಸರಗೊಂಡಿದ್ದಾರೆ. ಅವರು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಮಾತ್ರ ವಿದಾಯ ಹೇಳಿರುವುದರಿಂದ ಕ್ಲಬ್ ಫುಟ್ಬಾಲ್ ನಲ್ಲಿ ಇನ್ನೂ ಮುಂದುವರಿಯಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ. ಆದರೆ ಆ ಬಗ್ಗೆ ಅವರು ತಮ್ಮ ಇನ್ ಸ್ಟಾಗ್ರಾಂ ಲೇಖನದಲ್ಲಿ ಯಾವ ಸ್ಪಷ್ಟನೆಯನ್ನೂ ನೀಡಿಲ್ಲ.