ದುಬೈ: ಸೌಹಾರ್ದ ಲಹರಿ ಪ್ರಸ್ತುತಪಡಿಸುವ "ಸೌಹಾರ್ದ ಸ್ವರ ಸಂಗಮ-2026" ಮತ್ತು ದಿವಂಗತ ಯುವರಾಜ್ ಕೆ. ದೇವಾಡಿಗ ಅವರ ಸ್ಮರಣಾರ್ಥ "ಮಕ್ಕಳ ಗಾಯನ ಸ್ಪರ್ಧೆ"ಯ ಅಂತಿಮ ಸುತ್ತು ಕಾರ್ಯಕ್ರಮವು ಅ.24ರಂದು ಶನಿವಾರ ಅಜ್ಮಾನ್ ನ ಹ್ಯಾಬಿಟೇಟ್ ಶಾಲೆಯ ಸಭಾಂಗಣದಲ್ಲಿ ಜರಗಲಿದೆ.
ಮಧ್ಯಾಹ್ನ 3.30ರಿಂದ ರಾತ್ರಿಯ ವರೆಗೆ ಸಂಗೀತ, ನೃತ್ಯ,ಗಾಯನ,ಸನ್ಮಾನಗಳ ಮನರಂಜನೆಯ ಸುಂದರ ಸಮ್ಮಿಲನ ನಡೆಯಲಿದ್ದು, ಯುಎಇಯಲ್ಲಿ ಇರುವ ಎಲ್ಲಾ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.
"ಸೌಹಾರ್ದ ಸ್ವರ ಸಂಗಮ -2026" ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮೂರು ದಶಕಗಳ ಕಾಲ ಯುಎಇಯಲ್ಲಿ ಸಂಗೀತ ಪಯಣದಲ್ಲಿ ಸೇವೆ ಸಲ್ಲಿಸಿದ ಉದ್ಯಮಿ ಖ್ಯಾತ ಗಾಯಕ ಹರೀಶ್ ಶೇರಿಗಾರ್ ಹಾಗು ಯುಎಇಯಲ್ಲಿ ಹುಲಿವೇಷ, ಯಕ್ಷಗಾನ,ರಂಗಭೂಮಿ ಮತ್ತು ಚಿತ್ರಕಲೆಯಲ್ಲಿ ಸಾಧನೆ ಮಾಡಿರುವ ಗಿರೀಶ್ ನಾರಾಯಣ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.
ಈ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಬಿ ಆರ್ ಶೆಟ್ಟಿ,ಬ್ಲೂ ರೋಯಲ್ ಗ್ರೂಪ್ ಆಫ್ ಕಂಪನಿಯ ಆಡಳಿತ ನಿರ್ದೇಶಕರಾದ ರೊನಾಲ್ಡ್ ಮಾರ್ಟಿಸ್,ಯುಎಇ ಬಂಟ್ಸ್ ನ ಗೌರವ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ,ಕರ್ನಾಟಕ ಸಂಘ ದುಬೈ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ,ರಮಾನಂದ ಕುಡ್ವ,ಸುದರ್ಶನ್ ಹೆಗ್ಡೆ,ರಾಮಚಂದ್ರ ಹೆಗ್ಡೆ, ಶಶಿರೇಖಾ ಶ್ರೀಕಾಂತ್,ದಯಾ ಕಿರೊಡಿಯನ್,ವಿಶ್ವನಾಥ ಶೆಟ್ಟಿ,ದಿನೇಶ್ ದೇವಾಡಿಗ,ಡಾ.ಸೀಮಾ ಕಾಮತ್ ಉಪಸ್ಥಿತರಿರುವರು ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
