ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಕೆನರಾ ಬ್ಯಾಂಕ್ನ ಉಡುಪಿ ಪ್ರಾದೇಶಿಕ ಕಚೇರಿಯ ವತಿಯಿಂದ ಅ. 24 ಮತ್ತು 25ರಂದು ಉಡುಪಿಯ ಎಂಜಿಎಂ ಕಾಲೇಜಿನ ಮೈದಾನದಲ್ಲಿ ‘ಕೆನರಾ ರಿಟೇಲ್ ಮೇಳ-2026’ ಆಯೋಜಿಸಲಾಗಿದೆ ಎಂದು ಕೆನರಾ ಬ್ಯಾಂಕ್ನ ಮಣಿಪಾಲ ವೃತ್ತ ಕಚೇರಿಯ ಪ್ರಧಾನ ವ್ಯವಸ್ಥಾಪಕ ಎಚ್. ಗಂಗಾಧರ್ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳವು ಎರಡೂ ದಿನ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯಲಿದೆ. ಗ್ರಾಹಕರಿಗೆ ವಿವಿಧ ಸಾಲ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ ಎಂದರು.
ಮೇಳದಲ್ಲಿ ಯಾವುದೇ ನಿರ್ವಹಣಾ ಶುಲ್ಕವಿಲ್ಲದೆ ಸ್ಥಳದಲ್ಲೇ ಸಾಲ ಮಂಜೂರಾತಿಗೆ ಅವಕಾಶ ಕಲ್ಪಿಸಲಾಗುವುದು. ಶೇ. 7.4ರ ಬಡ್ಡಿದರದಲ್ಲಿ ಗೃಹ ಸಾಲ ಹಾಗೂ ಶೇ. 7.70ರ ಬಡ್ಡಿದರದಲ್ಲಿ ವಾಹನ ಸಾಲ ಸೌಲಭ್ಯ ಲಭ್ಯವಿರಲಿದೆ. ವಿವಿಧ ಪ್ರಮುಖ ಕಂಪನಿಗಳ ಅಧಿಕೃತ ಡೀಲರ್ಗಳು ಮೇಳದಲ್ಲಿ ಭಾಗವಹಿಸಲಿದ್ದು, ಗ್ರಾಹಕರು ತಮಗೆ ಅಗತ್ಯವಿರುವ ವಾಹನಗಳು ಹಾಗೂ ಇತರ ಉತ್ಪನ್ನಗಳ ಕುರಿತು ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಸಾಲ ಪಡೆಯಲು ಆಸಕ್ತಿ ಹೊಂದಿರುವ ಗ್ರಾಹಕರು ಮೇಳಕ್ಕೆ ಭೇಟಿ ನೀಡಿ ಲಭ್ಯವಿರುವ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
