ಉಳ್ಳಾಲ: ಮಂಗಳೂರಿನಿಂದ ಸೌದಿ ಅರೇಬಿಯಾದ ಪವಿತ್ರ ಮಕ್ಕಾ ಮತ್ತು ಮದೀನಾಕ್ಕೆ ಉಮ್ರಾ ಯಾತ್ರೆ ಕೈಗೊಂಡಿರುವ 500ಕ್ಕೂ ಹೆಚ್ಚು ಯಾತ್ರಾರ್ಥಿಗಳು, ತಮ್ಮ 15 ದಿನಗಳ ಯಾತ್ರಾ ಪ್ಯಾಕೇಜ್ ಪೂರ್ಣಗೊಂಡಿದ್ದರೂ ವಿಮಾನಗಳ ರದ್ದತಿ ಹಾಗೂ ಪ್ರಸ್ತುತ ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ಉದ್ದೇಶದಿಂದ, ಡಾ. ಹಾಜಿ ಯು.ಟಿ. ಖಾದರ್ ಅವರ ಅನುಮತಿಯ ಮೇರೆಗೆ ಉಳ್ಳಾಲ ಸೌಹಾರ್ದ ಸೇವಾ ಸಮಿತಿಯ ವತಿಯಿಂದ ಇಂದು ತೊಕ್ಕೊಟ್ಟಿನ ಹೋಟೆಲ್ ರತ್ನಮ್ನಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಉಡುಪಿ ಜಿಲ್ಲಾ ಎನ್ಆರ್ಐ ಮಾಜಿ ಅಧ್ಯಕ್ಷರಾದ ಡಾ. ಶೇಕ್ ವಹೀದ್ ದಾವುದ್, ಝಾಕಿರ್ ಇಕ್ಲಾಸ್, ಸೌಹಾರ್ದ ಸೇವಾ ಸಮಿತಿಯ ಅಧ್ಯಕ್ಷ ಅಬ್ದುಲ್ ಮಲಿಕ್ ಹಾಗೂ ಪ್ರಧಾನ ಕಾರ್ಯದರ್ಶಿ ಶುಕೂರ್ ಹಾಜಿ ಉಳ್ಳಾಲ ಉಪಸ್ಥಿತರಿದ್ದರು.
ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಯಾತ್ರಾರ್ಥಿಗಳ ಸುರಕ್ಷತೆ, ಅವರ ವಾಪಸಾತಿ ಹಾಗೂ ಈ ಸಂದರ್ಭದಲ್ಲಿ ಅಗತ್ಯ ನೆರವು ಒದಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಯಾತ್ರಾರ್ಥಿಗಳು ಮತ್ತು ಅವರ ಕುಟುಂಬಸ್ಥರು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಸರಕಾರಿ ಇಲಾಖೆಗಳು ಹಾಗೂ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂಬುದು ಸಮುದಾಯದ ಆಶಯವಾಗಿದೆ.
