ಬಿಜೆಪಿ ಶಾಸಕನ ಪುತ್ರನ ಲಂಚಾವತಾರ: ಮುಖ್ಯಮಂತ್ರಿ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟಿಸಿದ ಕಾಂಗ್ರೆಸ್
ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಲಂಚ ಪ್ರಕರಣ ಹಾಗು ಕೋಟ್ಯಂತರ ರೂ.ನಗದು ಪತ್ತೆ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ನಾಯಕರು ಇಂದು ಬೆಂಗಳೂರಿನಲ್ಲಿ ರಸ್ತೆಗಿಳಿದು ಭಾರೀ ಪ್ರತಿಭಟನೆ ನಡೆಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಚೇರಿಯಿಂದ ಮುಖ್ಯಮಂತ್ರಿಗಳ ರೇಸ್ ಕೋರ್ಸ್ ನಿವಾಸದ ಕಡೆ ಪ್ರತಿಭಟನೆ ಸಾಗಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಅಡಿಯಿಂದ ಮುಡಿವರೆಗೆ 40% ಕಮಿಷನ್‌ನಲ್ಲಿ ಮುಳುಗಿದೆ ಎಂಬ ನಮ್ಮ ಆರೋಪಗಳಿಗೆ ದಾಖಲೆ ಕೇಳುತ್ತಿದ್ದ ಮುಖ್ಯಮಂತ್ರಿಗಳಿಗೆ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಲಂಚ ಪಡೆಯುವಾಗ ಹಣದ ಸಮೇತ ಸಿಕ್ಕಿಬಿದ್ದ ದಾಖಲೆ ಸಾಕಲ್ಲವೇ? ಬಸವರಾಜ ಬೊಮ್ಮಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ಹುದ್ದೆಯ ಘನತೆ, ಗೌರವವನ್ನಾದರೂ ಉಳಿಸಲಿ ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಪೋಸ್ಟರ್, ಸೂಟ್ಕೇಸ್, ಹಣವಿರುವ ಗುಟ್ಕಾ ಬ್ಯಾಗ್, ನಕಲಿ ನೋಟ್ ಪ್ರದರ್ಶಿಸಿ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ವಿಪಕ್ಷನಾಯಕ ಸಿದ್ದರಾಮಯ್ಯ, ಶಾಸಕ ರಾಮಲಿಂಗಾರೆಡ್ಡಿ, ಶಾಸಕ ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಸಲೀಂ ಅಹ್ಮದ್ ಸೇರಿದಂತೆ ಹಲವಾರು ನಾಯಕರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಬಿಜೆಪಿ ಅಂದರೆ ಭ್ರಷ್ಟಾಚಾರ ಜನತಾ ಪಾರ್ಟಿ. ರಾಜ್ಯದಲ್ಲಿ ಇರುವುದು ಭ್ರಷ್ಟಾಚಾರದ ಬಿಜೆಪಿ ಸರ್ಕಾರ. ಪ್ರತಿಯೊಂದು ಕೆಲಸಕ್ಕೂ ಈ ಸರಕಾರ 40 ಪರ್ಸೆಂಟ್ ಕಮಿಷನ್ ಕೇಳುತ್ತಿದೆ. ರಾಜ್ಯದ ಜನರ ಹಣವನ್ನೂ ಲೂಟಿ ಮಾಡುತ್ತಿರುವ ಬಿಜೆಪಿ ಸರಕಾರದಿಂದಾಗಿ ಕಮಿಷನ್ ನೀಡಲಾಗದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಮಿಷನ್ ದಂಧೆಯ ಬಗ್ಗೆ ಈಗಾಗಲೇ ಬಗ್ಗೆ ಪ್ರಧಾನಿ ಮೋದಿಗೆ ಕೆಂಪಣ್ಣ ದೂರು ನೀಡಿದ್ದಾರೆ. ಆದರೆ ಪ್ರಧಾನಿ ಮೋದಿಯಿಂದ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ರಾಜ್ಯ ಹಾಗು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಿಮ್ಮ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದಕ್ಕೆ ಎಷ್ಟು ದಿನ ನಮ್ಮನ್ನು ಬಂಧಿಸಿ ಜೈಲಿನಲ್ಲಿಡಲು ಸಾಧ್ಯ? ನಾಳೆ ಇಡೀ ರಾಜ್ಯದ ಜನ ನಿಮ್ಮ ವಿರುದ್ಧ ದಂಗೆಯೇಳುತ್ತಾರೆ, ಎಲ್ಲರನ್ನೂ ಬಂಧಿಸಿ ಜೈಲುಗಟ್ಟಲು ನಿಮ್ಮಿಂದ ಸಾಧ್ಯವೇ Basavaraj Bommai ? ರಾಜೀನಾಮೆ ನೀಡಿ ಮನೆಗೆ ಹೋಗುವುದೊಂದೇ ನಿಮಗೆ ಉಳಿದಿರುವ ದಾರಿ ಎಂದು ಕಿಡಿಕಾರಿದ್ದಾರೆ.