ಉಡುಪಿ ಜಾಮೀಯ ಮಸೀದಿಯಲ್ಲಿ ಯಶಸ್ವಿಯಾಗಿ ನಡೆದ ಸರ್ವಧರ್ಮೀಯರ ಮಸೀದಿ ಸಂದರ್ಶನ; ಮಸೀದಿಗೆ ಭೇಟಿ ನೀಡಿದ ನೂರಾರು ಮಂದಿ ಸರ್ವಧರ್ಮೀಯರು
ಉಡುಪಿ: ಜಮಾತೆ ಇಸ್ಲಾಮಿ ಹಿಂದ್ ಉಡುಪಿ ಹಾಗು ಮಸೀದಿ ದರ್ಶನ ಸ್ವಾಗತ ಸಮಿತಿ ವತಿಯಿಂದ ಶನಿವಾರ ಬೆಳಗ್ಗೆಯಿಂದ ಸಂಜೆಯ ವರೆಗೆ ಆಯೋಜಿಸಲಾಗಿದ್ದ ಉಡುಪಿ ಜಾಮೀಯ ಮಸೀದಿಯಲ್ಲಿ ಮಸೀದಿ ಸಂದರ್ಶನ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮನೋ ವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಜನಸಾಮಾನ್ಯರಲ್ಲಿರುವ ಜಾತ್ಯತೀತ ಭಾವನೆಗೆ ಧಕ್ಕೆ ತರುವ ಹಾಗು ರಾಜಕೀಯ ಕಾರಣಕ್ಕೆ ಈ ಆಶಯವನ್ನು ಹಾಳು ಮಾಡುವ ಪ್ರಯತ್ನಗಳು ನಡೆಯುತ್ತಿದ್ದು, ಇದನ್ನು ಮೆಟ್ಟಿ ನಿಂತು ನಾವೆಲ್ಲರು ಒಟ್ಟಾಗಿ ಕೋಮು ಸೌಹಾರ್ದತೆಯನ್ನು ಕಾಪಾಡಬೇಕು ಎಂದರು.
ಮಸೀದಿ ದರ್ಶನ ಸ್ವಾಗತ ಸಮಿತಿ ಸದಸ್ಯ ಇದ್ರೀಸ್ ಹೂಡೆ ಮಾತನಾಡಿ, ಮಸೀದಿ ಕೇವಲ ಪ್ರಾರ್ಥನೆ ಸೀಮಿತವಾಗಿಲ್ಲ, ಇದು ಎಲ್ಲರೊಂದಿಗೆ ತೆರೆದುಕೊಳ್ಳುವ ಕೇಂದ್ರವಾಗಿದೆ. ಇಸ್ಲಾಮ್ ಭಾರತದಲ್ಲಿ 1400 ವರ್ಷಗಳಿಂದ ಇಲ್ಲಿನ ಜನಜೀವನ ಭಾಗವಾಗಿವುದರಿಂದ ಆಝಾನ್, ನಮಾಝ್, ಉಪವಾಸ ವೃತ ಹಾಗೂ ಇತರ ನಂಬಿಕೆಗಳು ಕೂಡ ಭಾರತೀಯ ಬಹುಸಂಸ್ಕೃತಿಯ ಒಂದು ಭಾಗವಾಗಿದೆ ಎಂದು ಹೇಳಿದರು.
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲದಾಸ್ ಬನ್ನಂಜೆ ಸೌಹಾರ್ದತೆಯ ಬಗ್ಗೆ ಮಾತನಾಡಿದರು. ಹಿರಿಯ ಚಿಂತಕ ಪ್ರೊ.ಫಣಿರಾಜ್, ಉಡುಪಿ ಜಂಗಮ ಮಠದ ಯು.ಸಿ. ನಿರಂಜನ್, ಜಮಾಅತೆ ಇಸ್ಲಾಮೀ ಹಿಂದ್'ನ ಅಬ್ದುಸ್ಸಲಾಂ ಉಪ್ಪಿನಂಗಡಿ, ಸಮಿತಿ ಉಪಾಧ್ಯಕ್ಷರಾದ ಯು.ಎಸ್.ವಾಹಿದ್, ವಿ.ಎಸ್.ಉಮರ್, ನಗರಸಭೆ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಮಾಜಿ ಅಧ್ಯಕ್ಷೆ ವರೋನಿಕಾ ಕರ್ನೆಲಿಯೋ, ಮಸೀದಿ ಅಧ್ಯಕ್ಷ ಅರ್ಷದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಸೀದಿ ದರ್ಶನ ಸ್ವಾಗತ ಸಮಿತಿ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ನೂರಾರು ಮಂದಿ ಸರ್ವಧರ್ಮೀಯರು ಮಸೀದಿಗೆ ಆಗಮಿಸಿ ಅಲ್ಲಿನ ಚಟುವಟಿಕೆಗಳನ್ನು ಅರಿತು ಕೊಂಡರು.