ಗುಜರಾತ್ ವಿವಿ ಹಾಸ್ಟೆಲ್‌ನಲ್ಲಿ ನಮಾಜ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಶಸ್ತ್ರಧಾರಿಗಳ ಗುಂಪು; ಐವರಿಗೆ ಗಾಯ
ಅಹಮದಾಬಾದ್: ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ನಮಾಜ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶನಿವಾರ ರಾತ್ರಿ ಒಳಗೆ ನುಗ್ಗಿದ ದೊಣ್ಣೆಗಳು ಹಾಗೂ ಚಾಕುಗಳನ್ನು ಹಿಡಿದ ಶಸ್ತ್ರಧಾರಿಗಳ ಗುಂಪೊಂದು, ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನ ದೇಶಗಳ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಈ ದಾಳಿಯಲ್ಲಿ ಐವರು ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಘಟನೆ ಸಂಬಂಧ ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿರುವ ರಾಜ್ಯ ಗೃಹ ಸಚಿವ ಹರ್ಷ್ ಸಂಘ್ವಿ, ಆರೋಪಿಗಳನ್ನು ಸಾಧ್ಯವಾದಷ್ಟು ಬೇಗನೆ ಬಂಧಿಸುವಂತೆ ಹಾಗೂ ಮುಕ್ತ ತನಿಖೆ ಬಗ್ಗೆ ಖಾತರಿ ವಹಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ವಿವಿ ಆವರಣದಲ್ಲಿ ಯಾವುದೇ ಮಸೀದಿ ಇಲ್ಲ. ಹೀಗಾಗಿ ರಮದಾನ್ ಮಾಸದ ರಾತ್ರಿ ವೇಳೆ ನಡೆಸುವ ತರವೀಹ್ ನಮಾಜ್ ಸಲ್ಲಿಸಲು ಹಾಸ್ಟೆಲ್ ಒಳಗೆ ತಾವು ಗುಂಪು ಸೇರಿದ್ದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಕೆಲವೇ ಸಮಯದಲ್ಲಿ ದೊಣ್ಣೆಗಳು ಹಾಗೂ ಚಾಕುಗಳನ್ನು ಹಿಡಿದ ಶಸ್ತ್ರಧಾರಿಗಳ ಗುಂಪು ಹಾಸ್ಟೆಲ್ ಒಳಗೆ ನುಗ್ಗಿ, ಅವರ ಮೇಲೆ ದಾಳಿ ನಡೆಸಿದೆ. ಅವರ ಕೊಠಡಿಗಳನ್ನು ಧ್ವಂಸಗೊಳಿಸಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಗುಂಪನ್ನು ತಡೆಯಲು ಹಾಸ್ಟೆಲ್‌ನ ಭದ್ರತಾ ಕಾವಲುಗಾರ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಘೋಷಣೆಗಳನ್ನು ಕೂಗಿದ ಗುಂಪು, ಹಾಸ್ಟೆಲ್ ಒಳಗೆ ನಮಾಜ್ ನಡೆಸಲು ನಿಮಗೆ ಅನುಮತಿ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿತು ಎಂಬುದಾಗಿ ಅಫ್ಘಾನಿಸ್ತಾನದ ವಿದ್ಯಾರ್ಥಿ ತಿಳಿಸಿದ್ದಾನೆ. "ಕೊಠಡಿಗಳ ಒಳಗೂ ಅವರು ನಮ್ಮ ಮೇಲೆ ಹಲ್ಲೆ ನಡೆಸಿದರು. ನಮ್ಮ ಲ್ಯಾಪ್‌ಟಾಪ್‌ಗಳು, ಫೋನ್‌ಗಳನ್ನು ಒಡೆದು ಹಾಕಿದರು. ಜತೆಗೆ ಬೈಕ್‌ಗಳಿಗೂ ಹಾನಿ ಮಾಡಿದರು" ಎಂದು ಆರೋಪಿಸಿದ್ದಾನೆ.
ಗಾಯಗೊಂಡಿರುವ ಐವರು ವಿದ್ಯಾರ್ಥಿಗಳಲ್ಲಿ ಅಫ್ಘಾನಿಸ್ತಾನ, ಶ್ರೀಲಂಕಾ ಹಾಗೂ ತುರ್ಕೆಮೆನಿಸ್ತಾನ್‌ನ ತಲಾ ಒಬ್ಬರು ಹಾಗೂ ಆಫ್ರಿಕಾ ದೇಶಗಳ ಇಬ್ಬರು ಸೇರಿದ್ದಾರೆ. ಘಟನೆ ನಡೆದ ಅರ್ಧ ಗಂಟೆ ಬಳಿಕ ಅಲ್ಲಿಗೆ ಪೊಲೀಸರು ಆಗಮಿಸಿದರು. ಆ ವೇಳೆಗೆ ಗುಂಪು ಸ್ಥಳದಿಂದ ಪರಾರಿಯಾಗಿತ್ತು. ಗಾಯಗೊಂಡಿರುವ ವಿದ್ಯಾರ್ಥಿಗಳು ಆಸ್ಪತ್ರೆಗಳಲ್ಲಿದ್ದು, ತಮ್ಮ ದೇಶಗಳ ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಆತ ತಿಳಿಸಿದ್ದಾನೆ.
ಘಟನೆಯನ್ನು ಖಂಡಿಸಿದ ಅಸಾದುದ್ದೀನ್ ಓವೈಸಿ
ಘಟನೆಯನ್ನು ಖಂಡಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಇದರಲ್ಲಿ ಮಧ್ಯಪ್ರವೇಶ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
"ಎಂತಹ ನಾಚಿಕೆಗೇಡು. ನಿಮ್ಮ ಭಕ್ತಿ ಹಾಗೂ ಧಾರ್ಮಿಕ ಘೋಷಣೆಗಳು ಮುಸ್ಲಿಮರು ಶಾಂತಯುತವಾಗಿ ತಮ್ಮ ಧರ್ಮವನ್ನು ಪಾಲಿಸುವಾಗ ಮಾತ್ರ ಹೊರಬರುತ್ತವೆ. ಮುಸ್ಲಿಮರನ್ನು ಕಂಡಾಗ ನೀವು ಅಷ್ಟೊಂದು ಕೋಪಗೊಳ್ಳುವುದು ಏಕೆ. ಇದು ಸಾಮೂಹಿಕ ತೀವ್ರಗಾಮಿಯಲ್ಲವೇ? ಇದು ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರ ತವರು ರಾಜ್ಯ. ಅವರು ಕಠಿಣ ಸಂದೇಶ ರವಾನಿಸಲು ಮಧ್ಯ ಪ್ರವೇಶ ಮಾಡುತ್ತಾರೆಯೇ? ಮುಸ್ಲಿಂ ವಿರೋಧಿ ದ್ವೇಷವು ಭಾರತದ ಒಳ್ಳೆಯತನವನ್ನು ನಾಶ ಮಾಡುತ್ತಿದೆ" ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಸಹ ಟ್ಯಾಗ್ ಮಾಡಿ ಓವೈಸಿ ಟ್ವೀಟ್ ಮಾಡಿದ್ದಾರೆ.