
ಸಿಎಎ ಜಾರಿ ಮಾಡಬೇಕೇ, ತಿರಸ್ಕರಿಸಬೇಕೆ ಎಂಬ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ಅಧಿಸೂಚನೆ ಹೊರಡಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ (CAA) ದೇಶಾದ್ಯಂತ ವಿರೋಧ ಪಕ್ಷಗಳಿಂದ ಅಪಸ್ವರ ಕೇಳಿಬರುತ್ತಿರುವ ಬೆನ್ನಲ್ಲೇ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಸಿಎಎ ಜಾರಿ ವಿಚಾರವಾಗಿ ಇನ್ನೂ ಏನೂ ಚರ್ಚೆ ಮಾಡಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಸಿಎಎ ಜಾರಿ ವಿಚಾರವಾಗಿ ಇನ್ನೂ ಚರ್ಚೆ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಸಭೆ ನಡೆಸಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ. ಸಿಎಎ ಜಾರಿ ಮಾಡಬೇಕೇ ಅಥವಾ ತಿರಸ್ಕರಿಸಬೇಕೆ ಎಂಬುದನ್ನು ಅವೆಲ್ಲವನ್ನೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಸಿಎಎ ಜಾರಿ ಬಗ್ಗೆ ಚರ್ಚೆ ನಡೆದಿಲ್ಲ, ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದರು.
ಬ್ಯಾಡಗಿಯಲ್ಲಿ ಮೆಣಸಿನ ದರ ದಿಢೀರ್ ಕುಸಿತದ ವಿರುದ್ಧ ರೈತರ ಪ್ರತಿಭಟನೆ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ 42 ಜನರನ್ನು ಬಂಧಿಸಿ ಅವರ ಹೇಳಿಕೆಗಳನ್ನು ಪಡೆಯಲಾಗಿದೆ. ಘಟನೆ ವೇಳೆ ಹೊರಗಿನಿಂದ ಬಂದವರೂ ಇದ್ದರು. ಅವರೆಲ್ಲ ಓಡಿಹೋದ್ದಾರೆ. ಸಿಸಿಟಿವಿ ಪರಿಶೀಲನೆ ಮಾಡಿ, ಒಂದು ತಂಡವನ್ನು ಆಂಧ್ರ ಪ್ರದೇಶದ ನೆಲ್ಲೂರು ಕಡೆ ಕಳುಹಿಸಲಾಗಿದೆ. ತಪ್ಪಿಸಿಕೊಂಡವರನ್ನು ಹುಡುಕಿ ಕರೆ ತರಲು ತಂಡ ಕಳುಹಿಸಲಾಗಿದೆ ಎಂದರು.
ಯಾವ ಕಾರಣಕ್ಕೆ ಗಲಾಟೆ ಸಂಭವಿಸಿತು ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಬೆಲೆ ಕಡಿಮೆ ಆಗಿದ್ದಕ್ಕೆ ಪ್ರತಿಭಟನೆ ಮಾಡಿದ್ದಾರೆ. ಬೆಲೆ ಕಡಿಮೆ ಮಾಡಿಸಿ ಗಲಾಟೆ ಮಾಡಿಸಿದ್ದರೇ ಎಂಬುದು ಗೊತ್ತಿಲ್ಲ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಅವರು ನಮ್ಮ ಪಕ್ಷದ ಅಧ್ಯಕ್ಷರು. ಅವರ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡಲು ಆಗುವುದಿಲ್ಲ. ಅವರ ತೀರ್ಮಾನದಂತೆ ನಡೆದುಕೊಳ್ಳಲಿದ್ದಾರೆ. ಅವರ ಜೊತೆ ನಾವು ಇರುತ್ತೇವೆ. ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದರೆ ನಮಗೆ ಶಕ್ತಿ ಬರುತ್ತದೆ ಎಂದರು.