
ದೇವೇಗೌಡರ ಪಕ್ಷ ಸರಿಯಿಲ್ಲವೆಂದೇ ಅವರ ಬುದ್ದಿವಂತ ಅಳಿಯ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ: ಸುರೇಶ್ ವ್ಯಂಗ್ಯ
ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪಕ್ಷ ಸರಿಯಿಲ್ಲವೆಂದು ಅವರ ಬುದ್ದಿವಂತ ಅಳಿಯ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, ಡಾ. ಸಿ.ಎನ್. ಮಂಜುನಾಥ್ ಸ್ಪರ್ಧೆ ಬಗ್ಗೆ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ದೇವೇಗೌಡರ ಅಳಿಯ ಆಗಿರುವ ಮಂಜುನಾಥ್ ಅವರು ಜೆಡಿಎಸ್‌ನಿಂದ ಸ್ಪರ್ಧೆ ಮಾಡುವ ಬದಲು ಬಿಜೆಪಿಯಿಂದ ಏಕೆ ಸ್ಪರ್ಧೆ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ಮಂಜುನಾಥ್ ರಾಜಕೀಯ ಪ್ರವೇಶದ ಬಗ್ಗೆ ನಾನು ಉತ್ತರ ಹೇಳೋದು ಸಮಂಜಸ ಅಲ್ಲ. ಅವರ ರಾಜಕೀಯ ಪ್ರವೇಶವನ್ನು ಸ್ವಾಗತ ಮಾಡುತ್ತೇವೆ. ರಾಜಕಾರಣಿಯನ್ನು ರಾಜಕಾರಣದ ದೃಷ್ಟಿಯಿಂದ ನೋಡಬೇಕು ಎಂದು ಹೇಳಿದರು.
ಡಾ. ಸಿ.ಎನ್. ಮಂಜುನಾಥ್ ಅವರು ದೇವೇಗೌಡರ ಕುಟುಂಬದ ಮತ್ತೊಂದು ಭಾಗವಾಗಿದ್ದಾರೆ. ದೇವೇಗೌಡರ ಕುಟುಂಬದ ಮತ್ತೊಂದು ಭಾಗ ಆಗಿರುವುದರಿಂದ ಅವರನ್ನು ಅಚ್ಚರಿ ಅಭ್ಯರ್ಥಿ ಎಂಬುದಾಗಿ ನಾನು ಹೇಳುವುದಿಲ್ಲ.
ನಿಮ್ಮನ್ನು ಸೋಲಿಸಲು ವಿರೋಧಿಗಳೆಲ್ಲ ಒಂದಾಗಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಸುರೇಶ್, ಅವರಿಗೆಲ್ಲ ದೇವರು ಒಳ್ಳೆಯದು ಮಾಡಲಿ, ನೀವು ನನ್ನ ಪರ ಇರಿ ಸಾಕು ಎಂದು ಮಾಧ್ಯಮದವರಿಗೆ ಹೇಳಿದರು.
ಡಾ. ಸಿ.ಎನ್. ಮಂಜುನಾಥ್ ಅವರು ಇನ್ನೂ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿಲ್ಲ. ಆದರೆ, ಅವರು ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪಕ್ಷ ಸೇರ್ಪಡೆಗೆ ಮೊದಲೇ ಬಿಜೆಪಿಯಿಂದ ಟಿಕೆಟ್ ಘೋಷಣೆ ಮಾಡಲಾಗಿದೆ.