ಮೋದಿಯ ಕೈ ಬಲಪಡಿಸಲು ಅಲ್ಪಸಂಖ್ಯಾತರು-ದಲಿತರು ಬೆಂಬಲ ನೀಡಿ: ಹೆಚ್'ಡಿ.ಕುಮಾರಸ್ವಾಮಿ
ಮಂಡ್ಯ: ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯೊಂದಿಗೆ ಜೆಡಿಎಸ್ ಕೈ ಜೋಡಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಅಲ್ಪಸಂಖ್ಯಾತರು ಮತ್ತು ದಲಿತರು ಬೆಂಬಲ ನೀಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್'ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಹಿಂದಿನ ಚುನಾವಣೆಯಲ್ಲಿ ಪುತ್ರ ನಿಖಿಲ್ ಸೋಲಿಗೆ ಅಹಿಂದ ಮತಗಳ ಸಿಗದೆ ಇದ್ದದ್ದು ಕಾರಣವಾಗಿತ್ತು ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ಸಮುದಾಯ ಮನವೊಲಿಸಲು ಯತ್ನ ನಡೆಸುತ್ತಿದ್ದಾರೆ.
ನಿನ್ನೆ ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಕುಮಾರಸ್ವಾಮಿಯವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ತಮಿಳುನಾಡು ರಾಜ್ಯಕ್ಕೆ ಉದಾರವಾಗಿ ಕಾವೇರಿ ನೀರನ್ನು ಹರಿಸಿತು. ಆದರೆ, ನಮ್ಮ ರೈತರ ಬೆಳೆಗಳಿಗೆ ನೀರು ನೀಡದೆ, ಬೆಳೆಗಳು ಒಣಗುವಂತೆ ಮಾಡಿದ್ದಾರೆ. ಕಬ್ಬಿನ ಗದ್ದೆಗಳನ್ನು ನೋಡಿದರೆ, ಹೃದಯ ಕಿತ್ತು ಬರುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ತಾವು ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ರೂ. ಕೃಷಿ ಸಾಲ ಮನ್ನಾ ಮಾಡಿದ್ದನ್ನು ಸ್ಮರಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಸರಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲ, ಸಂತ್ರಸ್ತ ರೈತರಿಗೆ ಬರ ಪರಿಹಾರ ನೀಡಲು ಕೇಂದ್ರದ ಹಣಕ್ಕಾಗಿ ಏಕೆ ಕಾಯಬೇಕು ಎಂದು ಪ್ರಶ್ನಿಸಿದರು.
ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಹಣ ತರದಿದ್ದರೆ ರಾಜಕೀಯ ನಿವೃತ್ಥಿ ಘೋಷಿಸುವುದಾಗಿ ಹೇಳಿದರು.
ನಾಡಿನ ನೀರಾವರಿ ಯೋಜನೆಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಸಮರ್ಥವಾಗಿ ದನಿಯೆತ್ತಬೇಕಿದೆ. ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯದ ಕಾವೇರಿ ಕಣಿವೆ ಜನರಿಗೆ ಶಾಶ್ವತ ಪರಿಹಾರ ದೊರಕಿಸಬೇಕಿದೆ. ಅದಕ್ಕಾಗಿ ದೇವೇಗೌಡರ ಮಾದರಿಯಲ್ಲಿ ರೈತರಿಗೆ ಧ್ವನಿಯಾಗಿ ಕೆಲಸ ಮಾಡುವುದಕ್ಕೆ ಅವಕಾಶ ನೀಡುವಂತ ಕೋರಲು ನಿಮ್ಮ ಮುಂದೆ ನಿಂತಿರುವುದಾಗಿ ಹೇಳಿದರು.
ಇದೇ ವೇಳೆ ಕನಕಪುರಕ್ಕೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕೊಡುಗೆಯನ್ನು ಪ್ರಶ್ನಿಸಿದ ಅವರು, ಈ ಬಾರಿ ಎಂಟು ಒಕ್ಕಲಿಗ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಡ್ಯದ ಜನರು ರೈತರ ಮತ್ತು ಬಡವರ ಧ್ವನಿಯಾಗಿರುವ ನಮ್ಮ ಪಕ್ಷದ ಮೇಲೆ ವಿಶ್ವಾಸವಿಡುತ್ತಾರೆಯ ಚುನಾವಣಾ ಹೋರಾಟಕ್ಕೆ ಧಾರಾಳವಾಗಿ ಖರ್ಚು ಮಾಡುತ್ತಿರುವ ಕಾಂಗ್ರೆಸ್ ಅನ್ನು ನಂಬುವುದಿಲ್ಲ ಎಂದು ಹೇಳಿದರು.