2014ರಲ್ಲಿ ಭರವಸೆಯೊಂದಿಗೆ, 2019ರಲ್ಲಿ ವಿಶ್ವಾಸ, 2024ರಲ್ಲಿ ಗ್ಯಾರಂಟಿಯೊಂದಿಗೆ ಜನರ ಬಳಿ ಹೋಗುತ್ತಿದ್ದೇವೆ: ಪ್ರಧಾನಿ ನರೇಂದ್ರ ಮೋದಿ
ಅಸ್ಸಾಂ: 2014ರಲ್ಲಿ ಭರವಸೆಯೊಂದಿಗೆ, 2019ರಲ್ಲಿ ವಿಶ್ವಾಸ, 2024ರಲ್ಲಿ ಗ್ಯಾರಂಟಿಯೊಂದಿಗೆ ಜನರ ಬಳಿ ಹೋಗುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪ್ರತಿಪಾದಿಸಿದ್ದಾರೆ.
ಇಂದು ಅಸ್ಸಾಂನ ಬೋರಕೂರ ಮೈದಾನದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 500 ವರ್ಷಗಳ ನಂತರ ಅಯೋಧ್ಯೆಯ ದೇಗುಲದಲ್ಲಿ ‘ಸೂರ್ಯ ತಿಲಕ’ ಕಾರ್ಯಕ್ರಮದೊಂದಿಗೆ ಶ್ರೀರಾಮನ ಜನ್ಮದಿನವನ್ನು ಆಚರಿಸಲಾಗುತ್ತಿದೆ ಎಂದರು.
ಇದೇ ವೇಳೆ ಜನರಿಗೆ ರಾಮನವಮಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ನಂತರ ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ಉತ್ಸವವನ್ನು ಆಚರಿಸಲಾಗುತ್ತಿರುವುದರಿಂದ ಅಯೋಧ್ಯೆಯು ಅತ್ಯಂತ ಆನಂದದಲ್ಲಿದೆ. "ನಾವು ಅಯೋಧ್ಯೆಯಲ್ಲಿನ ಆಚರಣೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ನಮ್ಮ ಮೊಬೈಲ್ ಬ್ಯಾಟರಿಗಳನ್ನು ಸ್ವಿಚ್ ಆನ್ ಮಾಡುವ ಮೂಲಕ ಮತ್ತು ಭಗವಾನ್ ರಾಮನಿಗೆ ನಮ್ಮ ಪ್ರಾರ್ಥನೆಗಳನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸೋಣ" ಎಂದು ಪ್ರಧಾನಿ ಹೇಳಿದರು.
ಮುಂದಿನ ಐದು ವರ್ಷಗಳವರೆಗೆ ತಾರತಮ್ಯವಿಲ್ಲದೆ ಎಲ್ಲರಿಗೂ ಉಚಿತ ಪಡಿತರವನ್ನು ಒದಗಿಸಲಾಗುವುದು ಮತ್ತು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ 'ಆಯುಷ್ಮಾನ್ ಭಾರತ್' ಯೋಜನೆಯಡಿ ಐದು ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಮೋದಿ ಹೇಳಿದರು.
"ಮುಂದಿನ 5 ವರ್ಷಗಳಲ್ಲಿ, ಬಡವರಿಗೆ ಇನ್ನೂ 3 ಕೋಟಿ ಹೊಸ ಮನೆಗಳನ್ನು ನಿರ್ಮಿಸಲಾಗುವುದು ಮತ್ತು ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬರೂ ಅವುಗಳನ್ನು ನೀಡಲಾಗುವುದು" ಎಂದು ಪ್ರಧಾನಿ ಭರವಸೆ ನೀಡಿದರು.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ಕಾಂಗ್ರೆಸ್ 60 ವರ್ಷಗಳಲ್ಲಿ ಮಾಡದ ಕೆಲಸವನ್ನು ಬಿಜೆಪಿ 10 ವರ್ಷಗಳಲ್ಲಿ ಮಾಡಿದೆ ಎಂದು ಹೇಳಿದರು.
ಇಂದು ಇಡೀ ದೇಶದಲ್ಲಿ ಮೋದಿ ಗ್ಯಾರಂಟಿ ನಡೆಯುತ್ತಿದ್ದು, ಈಶಾನ್ಯವೇ ಮೋದಿ ಗ್ಯಾರಂಟಿಗೆ ಸಾಕ್ಷಿಯಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಸಮಸ್ಯೆಗಳನ್ನಷ್ಟೇ ನೀಡಿದೆ. ಕಾಂಗ್ರೆಸ್ 60 ವರ್ಷಗಳಲ್ಲಿ ಮಾಡಲಾಗದ್ದನ್ನು ಮೋದಿಯವರು 10 ವರ್ಷಗಳಲ್ಲಿ ಮಾಡಿದರು ಎಂದರು.