
ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಿಂದಲೇ ಚಿನ್ನ ಕದ್ದು ಮತ್ತೊಂದು ಬ್ಯಾಂಕ್‌ನಲ್ಲಿ ಅಡವಿಟ್ಟ ಗೋಲ್ಡ್ ಲೋನ್ ಆಫೀಸರ್!
ದಾವಣಗೆರೆ: ವ್ಯಕ್ತಿಯೊಬ್ಬ ತಾನು ಗೋಲ್ಡ್ ಲೋನ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ನಿಂದಲೇ ಕೆಜಿಗಟ್ಟಲೆ ಚಿನ್ನ ಕದ್ದು ಅದನ್ನು ಬೇರೆ ಬೇರೆ ಬ್ಯಾಂಕ್ಗಳಲ್ಲಿ ಅಡವಿಟ್ಟ ವಿಚಿತ್ರ ಪ್ರಕರಣವೊಂದು ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯಲ್ಲಿ ಈ ಘಟನೆ ನಡೆದಿದೆ. ದಾವಣಗೆರೆಯ ದೇವರಾಜ್ ಅರಸ್ ಬಡಾವಣೆಯ ವಾಸಿಯಾಗಿರುವ ಸಂಜಯ್ ಟಿಪಿ ಎಂಬಾತ ನಿಟ್ಟುವಳ್ಳಿಯಲ್ಲಿರುವ ಸಿಎಸ್ಬಿ ಬ್ಯಾಂಕ್‌ನಲ್ಲಿ ಗೋಲ್ಡ್ ಲೋನ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ. ಆತ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಿಂದ ಒಟ್ಟು 2.61 ಕೋಟಿ ಮೌಲ್ಯದ 3 ಕೆಜಿ 643 ಗ್ರಾಂ ಚಿನ್ನಾಭರಣವನ್ನು ಕದ್ದು, ಬೇರೊಂದು ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಎನ್ನಲಾಗಿದೆ.
ಒಂದು ದಿನ ಬ್ಯಾಂಕ್ ಆಡಿಟ್ ಮಾಡುವಾಗ ಬಂಗಾರ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ತಕ್ಷಣ ಮ್ಯಾನೇಜರ್ ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಬ್ಯಾಂಕಿನಲ್ಲಿ ಗೋಲ್ಡ್ ಲೋನ್ ಆಫೀಸರ್ ಆಗಿ ಕೆಲಸ ಮಾಡುತಿದ್ದ ಸಂಜಯ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕಳವು ಮಾಡಿದ ಚಿನ್ನಾಭರಣಗಳನ್ನು ದಾವಣಗೆರೆ ನಗರದ ಫೆಡರಲ್ ಬ್ಯಾಂಕ್, ಫೆಡ್ ಬ್ಯಾಂಕ್ ಹಾಗೂ ಪಿ.ಬಿ.ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಪೈನಾನ್ಸ್ ಶಾಖೆಯಲ್ಲಿ ತಂದೆ, ತಾಯಿ ಹಾಗೂ ಸ್ನೇಹಿತರ ಹೆಸರಿನಲ್ಲಿ ಅಡ ಇಟ್ಟು ಸಾಲ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತ ಅಡವಿಟ್ಟಿದ್ದ ಒಟ್ಟು 2.61 ಕೋಟಿ ಮೌಲ್ಯದ 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ಕೆಟಿಜೆ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ ಸಂಜಯ್ ಆನ್ ಲೈನ್ ಬೆಟ್ಟಿಂಗ್ ಚಾಳಿಗೆ ಬಿದಿದ್ದ. ಪದೇ ಪದೇ ಗೋವಾಕ್ಕೆ ಹೋಗಿ ಕ್ಯಾಸಿನೋಗಳಲ್ಲಿ ಗೇಮ್ ಆಡುತ್ತಿದ್ದ. ತಾನು ಐಷಾರಾಮಿ ಜೀವನ ನಡೆಸಬೇಕೆಂದು ಕನಸು ಕಂಡಿದ್ದ. ಆತ ಕಳ್ಳತನ ಮಾಡಿದ ಹಣವನ್ನೆಲ್ಲಾ ಆನ್ ಲೈನ್ ಬೆಟ್ಟಿಂಗ್ನಲ್ಲೇ ಕಳೆದಿದ್ದಾನೆ ಎಂದು ತಿಳಿದು ಬಂದಿದೆ.