ದೇಶದಲ್ಲಿ ಇಂಗ್ಲೀಷ್‌ ಮಾತನಾಡುವವರು ನಾಚಿಕೆಪಡುವ ಕಾಲ ದೂರ ಇಲ್ಲ: ಕೇಂದ್ರ ಗೃಹ ಸಚಿವ ಅಮಿತ್ ಶಾ

ನವದೆಹಲಿ: ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ಶೀಘ್ರದಲ್ಲೇ ನಾಚಿಕೆಪಡುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂದಿದ್ದಾರೆ.

ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಸ್ಥಳೀಯ ಭಾಷೆಗಳು ಭಾರತದ ಗುರುತಿನ ಕೇಂದ್ರವಾಗಿದ್ದು, ವಿದೇಶಿ ಭಾಷೆಗಳಿಗಿಂತ ಹೆಚ್ಚು ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ. 

ಈ ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ಶೀಘ್ರದಲ್ಲೇ ನಾಚಿಕೆಪಡುತ್ತಾರೆ. ಅಂತಹ ಸಮಾಜದ ಸೃಷ್ಟಿಯು ದೂರವಿಲ್ಲ. ನಮ್ಮ ದೇಶದ ಭಾಷೆಗಳು ನಮ್ಮ ಸಂಸ್ಕೃತಿಯ ರತ್ನಗಳು ಎಂದು ನಾನು ನಂಬುತ್ತೇನೆ. ನಮ್ಮ ಭಾಷೆಗಳಿಲ್ಲದೆ, ನಾವು ನಿಜವಾದ ಭಾರತೀಯರಾಗುವುದಿಲ್ಲ ಎಂದಿದ್ದಾರೆ. 

ಭಾರತದ ಭಾಷಾ ಪರಂಪರೆಯನ್ನು ಮರಳಿ ಪಡೆಯಲು ದೇಶಾದ್ಯಂತ ನವೀಕೃತ ಪ್ರಯತ್ನಕ್ಕೆ ಕರೆ ನೀಡಿದರು. ಪ್ರಪಂಚದಾದ್ಯಂತ ವಸಾಹತುಶಾಹಿ ಗುಲಾಮಗಿರಿಯ ಸಂಕೇತವಾಗಿ ಇಂಗ್ಲಿಷ್ ಅನ್ನು ತಿರಸ್ಕರಿಸಲಾಗುವುದು ಎಂದು ನುಡಿದಿದ್ದಾರೆ.

ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ ಮತ್ತು ನಮ್ಮ ಧರ್ಮವನ್ನು ಅರ್ಥಮಾಡಿಕೊಳ್ಳಲು ಯಾವುದೇ ವಿದೇಶಿ ಭಾಷೆ ಸಾಕಾಗುವುದಿಲ್ಲ. ಅರೆಬೆಂದ ವಿದೇಶಿ ಭಾಷೆಗಳ ಮೂಲಕ ಸಂಪೂರ್ಣ ಭಾರತದ ಕಲ್ಪನೆಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. 

ಈ ಯುದ್ಧ ಎಷ್ಟು ಕಷ್ಟಕರ ಎಂದು ನನಗೆ ಸಂಪೂರ್ಣವಾಗಿ ತಿಳಿದಿದೆ. ಆದರೆ ಭಾರತೀಯ ಸಮಾಜವು ಇದರಲ್ಲಿ ಗೆಲ್ಲುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಮತ್ತೊಮ್ಮೆ, ಸ್ವಾಭಿಮಾನದಿಂದ ನಾವು ನಮ್ಮ ದೇಶವನ್ನು ನಮ್ಮದೇ ಭಾಷೆಗಳಲ್ಲಿ ನಡೆಸುತ್ತೇವೆ. ಜಗತ್ತನ್ನು ಸಹ ಮುನ್ನಡೆಸುತ್ತೇವೆ ಎಂದಿದ್ದಾರೆ. 

ಹೊಸ ಶಿಕ್ಷಣ ನೀತಿಯ (NEP) ಭಾಗವಾಗಿರುವ `ತ್ರಿಭಾಷಾ ಸೂತ್ರ’ವನ್ನು ಜಾರಿಗೆ ತರುವ ಮೂಲಕ ಕೇಂದ್ರವು ಹಿಂದಿಯನ್ನು ಹೇರುತ್ತಿದೆ ಎಂದು ದಕ್ಷಿಣದ ಕೆಲವು ವಿರೋಧ ಪಕ್ಷಗಳ ಆಡಳಿತದ ರಾಜ್ಯಗಳು ಆರೋಪಿಸಿರುವ ಬೆನ್ನಲ್ಲೇ ಅಮಿತ್ ಶಾ ಅವರು ಈ ಹೇಳಿಕೆ ನೀಡಿದ್ದಾರೆ.