ಇರಾನ್ ನ ಪರಮಾಣು ನೆಲೆಗಳ ಮೇಲೆ ಅಮೆರಿಕವು ವೈಮಾನಿಕ ದಾಳಿ; ಇದಕ್ಕುತ್ತರವಾಗಿ ಇಸ್ರೇಲ್ ನ 10 ಪ್ರದೇಶಗಳ ಮೇಲೆ ಇರಾನ್‌ನಿಂದ ಕ್ಷಿಪಣಿ ದಾಳಿ

ಜೆರುಸಲೇಮ್ : ಇರಾನ್ ನ ಪರಮಾಣು ನೆಲೆಗಳ ಮೇಲೆ ಅಮೆರಿಕವು ವೈಮಾನಿಕ ದಾಳಿ ನಡೆಸಿದೆ. ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಇರಾನಿನ ಪರಮಾಣು ನೆಲೆಗಳ ಮೇಲೆ ಅಮೆರಿಕವು ಅತ್ಯಂತ ಯಶಸ್ವಿಯಾಗಿ ದಾಳಿಗಳನ್ನು ನಡೆಸಿದೆ. ಎಲ್ಲಾ ವಿಮಾನಗಳು ಈಗ ಇರಾನಿನ ವಾಯುಪ್ರದೇಶದಿಂದ ಹೊರಗಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ದಾಳಿ ಬೆನ್ನಲ್ಲೇ ಇಸ್ರೇಲ್ ನ 10 ಪ್ರದೇಶಗಳ ಮೇಲೆ ಇರಾನ್‌ನಿಂದ ಕ್ಷಿಪಣಿ ದಾಳಿ ನಡೆದಿದ್ದು, ಕನಿಷ್ಠ 11 ಮಂದಿಗೆ ಗಾಯಗೊಂಡಿದ್ದಾರೆ.

ಕಾರ್ಮೆಲ್, ಹೈಫಾ, ಟೆಲ್ ಅವಿವ್ ಪ್ರದೇಶ ಸೇರಿದಂತೆ ಇಸ್ರೇಲ್‌ನ 10 ಸ್ಥಳಗಳ ಮೇಲೆ ಇರಾನ್‌ನ ರಾಕೆಟ್‌ಗಳು ಅಪ್ಪಳಿಸಿದೆ ಎಂದು ಇಸ್ರೇಲ್‌ನ ತುರ್ತು ಸೇವೆಗಳ ವಕ್ತಾರರು ತಿಳಿಸಿದ್ದಾರೆ.

ಈ ಮಧ್ಯೆ ಇಸ್ರೇಲ್‌ನ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ಹೇಳಿದೆ.

ಇಸ್ರೇಲ್‌ನ ಸಂಶೋಧನಾ ಕೇಂದ್ರಗಳು, ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ತಿಳಿಸಿದೆ.