'ಉಡುಪಿ ಉಚ್ಚಿಲ ದಸರಾ'; ಜನರನ್ನು ಮನರಂಜಿಸಿದ 'ಮೊಗವೀರ ಯುವ ಸಂಘಟನೆ'ಯ ಜಾದೂ: ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ 'ನಾದ ವೈಕುಂಠ'
ಫೋಟೋ: ಸಚಿನ್ ಉಚ್ಚಿಲ
ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 'ಉಡುಪಿ ಉಚ್ಚಿಲ ದಸರಾ'ದಲ್ಲಿ ಬುಧವಾರ ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ವಿಶೇಷ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳು ವಿಶೇಷವಾಗಿ ಮೂಡಿ ಬಂದವು.
ಮೊಗವೀರ ಯುವ ಸಂಘಟನೆಯ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಹಾಗು ಮನೋರಂಜನಾ ಕಾರ್ಯಕ್ರಮಗಳು ಜನರನ್ನು ಮನರಂಜಿಸಿತು.
ಶರವಣ ಸೇರಿದಂತೆ ವಿಧಾನ ಪರಿಷತ್ ಸದಸ್ಯರ ಭೇಟಿ
ಇದಕ್ಕೂ ಮೊದಲು ದಸರಾಕ್ಕೆ ಬುಧವಾರ ವಿಧಾನ ಪರಿಷತ್ ಸದಸ್ಯರಾದ ಶರವಣ, ಪ್ರತಾಪ ಸಿಂಹ ನಾಯಕ್, ತಿಮ್ಮಣ್ಣಪ್ಪ ಕಮ್ಮಕನೂರು, ಡಿ.ಎಸ್. ಅರುಣ್, ನವೀನ್ ಕೆ.ಎಸ್.ಅವರು ಕಾಪು ಶಾಸಕ ಸುರೇಶ ಶೆಟ್ಟಿ ಗುರ್ಮೆ ಅವರೊಂದಿಗೆ ಬಂದು ದೇವರ ದರ್ಶನ ಪಡೆದರು. ಈ ವೇಳೆ ಅವರನ್ನು ನಾಡೋಜ ಡಾ. ಜಿ. ಶಂಕರ್ ಸ್ವಾಗತಿಸಿದರು.
ಮೊಗವೀರ ಯುವ ಸಂಘಟನೆಯ ಸದಸ್ಯರಾದ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾದೂ ಪ್ರದರ್ಶನ ನೀಡಿ ಖ್ಯಾತಿ ಗಳಿಸಿರುವ ಪ್ರಕಾಶ್ ಹೆಮ್ಮಾಡಿ ಅವರಿಂದ ಜಾದೂ ಪ್ರದರ್ಶನ ನಡೆಯಿತು. ಅವರ ಅದ್ಭುತ ಜಾದೂ ಪ್ರದರ್ಶನ ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿತು.
ಜೊತೆಗೆ ಮೊಗವೀರ ಯುವ ಸಂಘಟನೆಯ ಸದಸ್ಯೆರಾದ ಸುಷ್ಮಿತಾ ಸಾಲಿಗ್ರಾಮ ಹಾಗು ಬ್ರಾಹ್ಮೀ ಕುಂದಾಪುರ ಅವರಿಂದ ಭರತನಾಟ್ಯ ಪ್ರಸ್ತುತವಾಯಿತು.
ಬಳಿಕ ನಡೆದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ನವ ಯಕ್ಷಗಾನ ಭಾಗವತರಿಂದ “ನಾದ ವೈಕುಂಠ” ಕಾರ್ಯಕ್ರಮ ವಿಶೇಷವಾಗಿ ಮೂಡಿ ಬಂತು.
ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ರವಿಚಂದ್ರ ಕನ್ನಡಿಕಟ್ಟೆ, ದಿನೇಶ್ ಶೆಟ್ಟಿ ಬೆಣ್ಣೆ ದರ್ಶನ್ ಗೌಡ, ವಿಶ್ವಾಸ್ ಭಟ್ ಕಾರ್ಬೆಟ್ಟು, ಶಾಲಿನಿ ಹೆಬ್ಬಾರ್, ಕಾವ್ಯಶ್ರೀ ಅಜೇರು, ಶ್ರೀರಕ್ಷಾ ಹೆಗಡೆ ಭಾಗವತಿಕೆ ನಡೆಸಿಕೊಟ್ಟರು.
ಹಿಮ್ಮೇಳದಲ್ಲಿ ಗುರುಪ್ರಸಾದ್ ಬೊಳಿಂಜಡ್ಕ, ಸ್ಕಂಧ ಕೊನ್ನಾರ್, ಅದೈತ್ ಕನ್ಯಾನ, ನಿಶ್ವತ್ ಜೋಗಿ, ಜೋಡುಕಲ್ಲು ಎನ್.ಜಿ. ಹೆಗಡೆ, ಸುಜನ್ ಹಾಲಾಡಿ, ವಿಶ್ವಂಭರ ಅಲ್ಪ ಸಹಕರಿಸಿದರು. ಪ್ರೊ. ಪವನ್ ಕಿರಣಕೆರೆ ನಾದ ನಿರ್ದೇಶನ ಮಾಡಿದರೆ, ಸುಶಾಸನ ಉಡುಪಿ ನಾದ ಸಂಯೋಜನೆಯಲ್ಲಿ ಕಾರ್ಯಕ್ರಮ ವಿಶೇಷವಾಗಿ ಮೂಡಿಬಂತು.
ಸನ್ಮಾನ: ತನ್ನ ಜಾದೂ ಪ್ರದರ್ಶನದ ಮೂಲಕ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿದ ಜಾದೂಗಾರ ಪ್ರಕಾಶ್ ಹೆಮ್ಮಾಡಿ ಹಾಗು ಅವರ ತಂಡವನ್ನು ಮತ್ತು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರನ್ನು ಉಡುಪಿ ಕೆನರಾ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಮಹಾಮಾಯೆ ಪ್ರಸಾದ್ ರಾಯ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್, ಉದ್ಯಮಿ ಸಾಧು ಸಾಲ್ಯಾನ್, ರಾಮಚಂದ್ರ ಕುಂದರ್, ಸುನೀಲ್ ಜೋನೆಸ್ ಅವರು ಸ್ಮರಣಿಕೆ, ಶಾಲು ನೀಡಿ ಸನ್ಮಾನಿಸಿದರು.
“ನಾದ ವೈಕುಂಠ” ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ತಂಡದವರನ್ನು ಈ ವೇಳೆ ಸ್ಮರಣಿಕೆ, ಶಾಲು ಹೊದಿಸಿ ಗೌರವಿಸಿದರು. ಈ ವೇಳೆ ಡಾ. ಜಿ. ಶಂಕರ್ ಅವರೊಂದಿಗೆ ಕಾಪು ಶಾಸಕ ಸುರೇಶ ಶೆಟಿಯ್ ಗುರ್ಮೆ, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಸುವರ್ಣ ಬೆಳ್ಳಂಪಳ್ಳಿ, ದಿನೇಶ್ ಎರ್ಮಾಳ್, ಸತೀಶ್ ಬಾರಕೂರು, ಮಂಜುನಾಥ್, ನಾರಾಯಣ ಕುಂದರ್, ಶಂಕರ್ ಸಾಲ್ಯಾನ್, ಉಷಾರಾಣಿ, ಅಪ್ಪಿ ಟೀಚರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಉಡುಪಿಯ ಸೃಷ್ಟಿ ಸಂಗೀತ ಕಲಾಕೇಂದ್ರ ಕಲಾವಿದರಿಂದ 'ಭಕ್ತಿ ಗೀತಾಂಜಲಿ' ಸಂಗೀತ ಕಾರ್ಯಕ್ರಮ, ಭಜನಾ ಸಂಕೀರ್ತನೆ, ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮವು ನಡೆಯಿತು. ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.










