ಮಾಲೂರು ಶಾಸಕ ನಂಜೇಗೌಡರ ಆಯ್ಕೆ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

ಮಾಲೂರು ಶಾಸಕ ನಂಜೇಗೌಡರ ಆಯ್ಕೆ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರ ಕಾಂಗ್ರೆಸ್‌ ಶಾಸಕ ಕೆವೈ ನಂಜೇಗೌಡ ಅವರ ಶಾಸಕ ಸ್ಥಾನ ರದ್ದುಗೊಳಿಸಿ ಹೈಕೋರ್ಟ್ ಕೊಟ್ಟಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಮರುಮತ ಎಣಿಕೆ ಮಾಡಲು ಮಹತ್ವದ ಸೂಚನೆ ನೀಡಿದ್ದು ನಂಜೇಗೌಡರಿಗೆ ತುಸು ಸಮಾಧಾನ ತಂದಿದೆ.

ಹೈಕೋರ್ಟ್‌ ಶಾಸಕ ಸ್ಥಾನ ರದ್ದು ಮಾಡಿದ್ದನ್ನು ಪ್ರಶ್ನೆ ಮಾಡಿ ಕೆವೈ ನಂಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ನ್ಯಾ. ಸೂರ್ಯಕಾಂತ್‌ ಹಾಗೂ ನ್ಯಾ. ಜೊಯಮಲ್ಯ ಬಾಗ್ಚಿ ಅವರ ಪೀಠದಿಂದ ವಿಚಾರಣೆ ನಡೆಸಲಾಯಿತು. ಈ ವೇಳೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

2023 ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದ ಮತ ಎಣಿಕೆಯಲ್ಲಿ ಅಕ್ರಮ ಪ್ರಕರಣದಲ್ಲಿ ಸೆಪ್ಟೆಂಬರ್ 16 ರಂದು ಕರ್ನಾಟಕ ಹೈಕೋರ್ಟ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆವೈ ನಂಜೇಗೌಡ ಆಯ್ಕೆಯನ್ನು ರದ್ದುಪಡಿಸಿತ್ತು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಂಜೇಗೌಡರಿಗೆ ಒಂದು ತಿಂಗಳ ಅವಕಾಶ ನೀಡಿತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಮರು ಮತ ಎಣಿಕೆಗೆ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್‌ ಫಲಿತಾಂಶವನ್ನು ಯಾವುದೇ ಕಾರಣಕ್ಕೂ ಪ್ರಕಟ ಮಾಡದೇ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ಸುಪ್ರೀಂ ಕೋರ್ಟ್ ಸೂಚನೆ ಕೊಟ್ಟಿದೆ. ನ್ಯಾಯಾಲಯದ ಅನುಮತಿಯಿಲ್ಲದೆ ಫಲಿತಾಂಶ ಘೋಷಿಸುವಂತಿಲ್ಲ.

ಮರು ಎಣಿಕೆ ನಡೆಸಿ ಅದರ ಫಲಿತಾಂಶ ಬರುವವರೆಗೂ ನಂಜೇಗೌಡ ಅವರು ಶಾಸಕ ಸ್ಥಾನ ಅಬಾಧಿತ ಎಂದು ಕೋರ್ಟ್‌ ಹೇಳಿದೆ. ಪ್ರಕರಣದ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿದೆ.

Ads on article

Advertise in articles 1

advertising articles 2

Advertise under the article