ಲೋಕನಾಯಕ ಡಾ.ಭೀಮಣ್ಣ ಖಂಡ್ರೆ ಅಸ್ತಂಗತ; ಹೋರಾಟದ ಯುಗಕ್ಕೆ ವಿರಾಮ: ಗಜಾನಂದ್ ಮೊಳಕಿರೆ

ಲೋಕನಾಯಕ ಡಾ.ಭೀಮಣ್ಣ ಖಂಡ್ರೆ ಅಸ್ತಂಗತ; ಹೋರಾಟದ ಯುಗಕ್ಕೆ ವಿರಾಮ: ಗಜಾನಂದ್ ಮೊಳಕಿರೆ

ಮಾಜಿ ಸಚಿವರು, ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರು ಹಾಗೂ ಲಿಂಗಾಯತ ಸಮಾಜದ ಮೇರು ನಾಯಕ, ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರು ಶುಕ್ರವಾರ ವಯೋಸಹಜವಾಗಿ ವಿಧಿವಶರಾದ ಸುದ್ದಿ ಅತ್ಯಂತ ನೋವು ಮತ್ತು ದುಃಖವನ್ನುಂಟುಮಾಡಿದೆ. ಅವರ ಅಗಲಿಕೆ ಲಿಂಗಾಯತ ಸಮಾಜಕ್ಕೆ ಮಾತ್ರವಲ್ಲ, ಇಡೀ ರಾಜ್ಯದ ಸಾಮಾಜಿಕ–ರಾಜಕೀಯ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಯುವ ಮುಖಂಡ ಗಜಾನಂದ್ ಮೊಳಕಿರೆ ನೋವು ತೊಡಿಕೊಂಡರು.

ಸ್ವಾತಂತ್ರ್ಯ ಹೋರಾಟಗಾರರು, ನಿಜಾಮನ ಆಡಳಿತದ ದಮನಕಾರಿ ನೀತಿಗಳ ವಿರುದ್ಧ ಧೈರ್ಯವಾಗಿ ಹೋರಾಡಿದ ಯೋಧ, ಏಕೀಕರಣ ಚಳುವಳಿಯ ಮುಂಚೂಣಿಯ ನಾಯಕ—ಇಂತಹ ಅನೇಕ ಗುರುತುಗಳೊಂದಿಗೆ ಕಲ್ಯಾಣ ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದ ಹೆಸರು ಭೀಮಣ್ಣ ಖಂಡ್ರೆ. ಅವರ ತ್ಯಾಗ, ಹೋರಾಟ ಮತ್ತು ದೂರದೃಷ್ಟಿಯ ಫಲವಾಗಿ ಇಂದು ಬೀದರ ಸೇರಿದಂತೆ ಕಲ್ಯಾಣ ಕರ್ನಾಟಕದ ಬಹುತೇಕ ಭಾಗಗಳು ಕರ್ನಾಟಕದ ಅವಿಭಾಜ್ಯ ಅಂಗಗಳಾಗಿ ಉಳಿದಿವೆ.

ನಿಜಾಮನ ಆಡಳಿತದ ಕಾಲದಲ್ಲಿ ಹೈದರಾಬಾದ್ ಸಂಸ್ಥಾನದಡಿ ಇದ್ದ ಈ ಪ್ರದೇಶಗಳ ಜನರು ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಅನೇಕ ಅನ್ಯಾಯಗಳನ್ನು ಅನುಭವಿಸುತ್ತಿದ್ದರು. ಇಂತಹ ಸಂಕಷ್ಟಕರ ಸಂದರ್ಭದಲ್ಲಿ ಭೀಮಣ್ಣ ಖಂಡ್ರೆ ಅವರು ಭಯವಿಲ್ಲದೆ ಜನರನ್ನು ಸಂಘಟಿಸಿ, ಸ್ವಾತಂತ್ರ್ಯ ಮತ್ತು ಸಮಾನತೆಯ ಸಂಕಲ್ಪದೊಂದಿಗೆ ಹೋರಾಟಕ್ಕೆ ಇಳಿದರು. ನಿಜಾಮನ ಆಡಳಿತದ ವಿರುದ್ಧ ನಡೆದ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅವರು, ಜನಮನದಲ್ಲಿ ಸ್ವಾಭಿಮಾನ ಹಾಗೂ ಸ್ವರಾಜ್ಯದ ಆಸೆಯನ್ನು ಬೆಳಗಿಸಿದ ನಾಯಕನಾಗಿದ್ದರು.

ಭಾಷೆ, ಸಂಸ್ಕೃತಿ ಮತ್ತು ಭೌಗೋಳಿಕ ಸಮೀಪತೆಯ ಆಧಾರದ ಮೇಲೆ ಕನ್ನಡ ನಾಡಿನೊಂದಿಗೆ ಏಕೀಕರಣವಾಗಬೇಕು ಎಂಬ ಬಲವಾದ ನಂಬಿಕೆ ಅವರ ಹೋರಾಟದ ಕೇಂದ್ರಬಿಂದುವಾಗಿತ್ತು. ಏಕೀಕರಣ ಚಳುವಳಿಯಲ್ಲಿ ಅವರು ವಹಿಸಿದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಕಲ್ಯಾಣ ಕರ್ನಾಟಕದ ಭಾಗಗಳು ಬೇರೆ ರಾಜ್ಯಕ್ಕೆ ಸೇರದೆ ಕರ್ನಾಟಕದಲ್ಲೇ ಉಳಿಯಲು ಅವರ ಹೋರಾಟ ನಿರ್ಣಾಯಕ ಕಾರಣವಾಯಿತು. ವಿಶೇಷವಾಗಿ ಬೀದರ ಜಿಲ್ಲೆಯು ಕರ್ನಾಟಕದ ಭಾಗವಾಗಿರುವುದಕ್ಕೆ ಅವರ ಅಚಲ ಹೋರಾಟ, ರಾಜಕೀಯ ಜಾಗೃತಿ ಮತ್ತು ಜನಸಂಘಟನೆ ಪ್ರಮುಖ ಪಾತ್ರ ವಹಿಸಿದೆ.

ಸೇವೆ, ತ್ಯಾಗ, ನಿಷ್ಠೆ ಮತ್ತು ಮಾನವೀಯ ಮೌಲ್ಯಗಳೇ ಅವರ ಜೀವನದ ಉಸಿರಾಗಿದ್ದವು. ಅಧಿಕಾರದಲ್ಲಿದ್ದಾಗಲೂ ಅಧಿಕಾರವಿಲ್ಲದ ಸಮಯದಲ್ಲಿಯೂ ಅವರು ಸದಾ ಜನರ ನಡುವೆಯೇ ಇದ್ದು, ಜನರಿಗಾಗಿ ಬದುಕಿದರು. ಕಾಯಕ, ದಾಸೋಹ ಮತ್ತು ಸಮಾನತೆ ಎಂಬ ಲಿಂಗಾಯತ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವುಗಳನ್ನು ಸಮಾಜದ ನೈಜ ಬದುಕಿನಲ್ಲಿ ಅನುಷ್ಠಾನಗೊಳಿಸಲು ಅಚಲವಾಗಿ ಶ್ರಮಿಸಿದ ಮಹಾನ್ ಚೇತನ ಅವರು.

ಮಾಜಿ ಸಚಿವರಾಗಿ ಅವರು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿದ ರೀತಿ, ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾಗಿ ಸಮಾಜಕ್ಕೆ ನೀಡಿದ ದಿಕ್ಕು, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ಕುರಿತು ಅವರ ದೂರದೃಷ್ಟಿ ಇಂದಿಗೂ ಸ್ಮರಣೀಯ. ಸರಳತೆ, ಸೌಜನ್ಯ ಮತ್ತು ನೈತಿಕ ರಾಜಕಾರಣ ಅವರ ವ್ಯಕ್ತಿತ್ವದ ಅಡಿಗಲ್ಲಾಗಿತ್ತು. ಜನರ ವಿಶ್ವಾಸವೇ ತಮ್ಮ ಅತಿ ದೊಡ್ಡ ಸಂಪತ್ತೆಂದು ನಂಬಿದ ಅಪರೂಪದ ನಾಯಕನಾಗಿದ್ದರು  ಎಂದು ಗಜಾನಂದ್ ಮೊಳಕಿರೆ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article