ಉಡುಪಿಯಲ್ಲಿ 77ನೇ ಸಂವಿಧಾನ ಅರ್ಪಣ ದಿನಾಚರಣೆ; ಭೀಮ ಘರ್ಜನೆಯೊಂದಿಗೆ ಅದ್ದೂರಿ ಆಚರಣೆ
ಉಡುಪಿ: ಬೆಂಗಳೂರು ರಾಜ್ಯ ಸಮಿತಿಯ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) – ಭೀಮ ಘರ್ಜನೆ ಇವರಿಂದ 77ನೇ ಸಂವಿಧಾನ ಅರ್ಪಣ ದಿನವನ್ನು ಉಡುಪಿ ಬನ್ನಂಜೆಯ ನಾರಾಯಣಗುರು ಆಡಿಟೋರಿಯಂನಲ್ಲಿ ರವಿವಾರ ಭವ್ಯವಾಗಿ ಆಚರಿಸಲಾಯಿತು.
ಈ ಪ್ರಯುಕ್ತ ಉಡುಪಿಯ ತಾಲೂಕು ಪಂಚಾಯತ್ ಕಚೇರಿಯಿಂದ ಗೌತಮ್ ತಲ್ಲೂರು ಹಾಗೂ ಗಗನ್ ತಲ್ಲೂರು ಅವರ ನೇತೃತ್ವದಲ್ಲಿ ನೀಲಿ ಭೀಮ ಸೈನ್ಯದ ಪಥಸಂಚಲನಕ್ಕೆ ಡಾ. ಉದಯ್ ಕುಮಾರ್ ತಲ್ಲೂರು ಅವರು ಚಾಲನೆ ನೀಡಿದರು. ಪಥಸಂಚಲನವು ಉಡುಪಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಾಗಿ ಸಾಗುತ್ತ ನಾರಾಯಣಗುರು ಆಡಿಟೋರಿಯಂನಲ್ಲಿ ಸಮಾಪ್ತಿಗೊಂಡಿತು.
ಕಾರ್ಯಕ್ರಮವನ್ನು ಕಲ್ಪವೃಕ್ಷಕ್ಕೆ ನೀರೆಯುವ ಮೂಲಕ ವಕೀಲರಾದ ರವಿಕಿರಣ್ ಮುರುಡೇಶ್ವರ ಕುಂದಾಪುರ ಅವರು ಉದ್ಘಾಟಿಸಿ ಮಾತನಾಡಿ, “ಸೂರ್ಯ ಒಬ್ಬನೇ, ಚಂದ್ರ ಒಬ್ಬನೇ; ಅದೇ ರೀತಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೂಡ ಒಬ್ಬರೇ. ಅವರಂತಹ ಮಹಾನ್ ವ್ಯಕ್ತಿ ಮತ್ತೊಮ್ಮೆ ಹುಟ್ಟಿ ಬರುವುದು ಅಸಾಧ್ಯ” ಎಂದು ಅಂಬೇಡ್ಕರ್ ಅವರ ಜೀವನ ಚರಿತ್ರೆ ಮತ್ತು ಸಂವಿಧಾನಿಕ ಕೊಡುಗೆಗಳನ್ನು ಮನಮುಗ್ಧಗೊಳಿಸುವಂತೆ ವಿವರಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿ ರಾಮ್ ಶಂಕರ್ ಅವರು ಭೀಮ ರತ್ನ ರಾಜ್ಯ ಪ್ರಶಸ್ತಿಯನ್ನು ಸಮಾಜ ಸೇವಕ ನಿಂಗರಾಜು (ಮೈಸೂರು), ಕಲಾಕ್ಷೇತ್ರದಲ್ಲಿ ಹೆಸರು ಮಾಡಿದ ಸಿದ್ದು ಮೇಲಿನ ಮನೆ, ಸಮಾಜ ಸೇವಕ ಎಂ. ನಿತ್ಯಾನಂದ ತೆಕ್ಕಟ್ಟೆ, ನಿವೃತ್ತ ದೈಹಿಕ ಶಿಕ್ಷಕ ಗೋವಿಂದ ಎಚ್. ನಾಯ್ಕ, ನೀಲಿ ಸೈನ್ಯ ಕಮಾಂಡರ್ ಹಾಗೂ ಎಸ್‌ಎಸ್‌ಎಲ್‌ಸಿ ಗಣಿತದಲ್ಲಿ 100 ಅಂಕ ಪಡೆದ ವಿದ್ಯಾರ್ಥಿಗೆ ಪ್ರದಾನಿಸಿ ಸನ್ಮಾನಿಸಿದರು. ಇದೇ ವೇಳೆ ಅಂಬೇಡ್ಕರ್ ಅವರು ಬರೆದ ಗ್ರಂಥಗಳು ತನ್ನ ಬದುಕಿನ ಮೇಲೆ ಬೀರಿದ ಪ್ರಭಾವವನ್ನು ಮನೋಜ್ಞವಾಗಿ ಹಂಚಿಕೊಂಡರು.
ಅಂಬೇಡ್ಕರ್ ಕುರಿತು ಭಾಷಣ ಮಾಡಿದ ತಲ್ಲೂರು ಕೋಟೆಬಾಗಿನ ಅಂಗನವಾಡಿ ಪುಟಾಣಿಗಳಾದ ಶರೀಕ್ಷ ಮತ್ತು ಅನೀಶ್ ಕುಮಾರ್ ಅವರ ಪ್ರತಿಭೆಯನ್ನು ಮೆಚ್ಚಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಮರಣಿಕೆ ನೀಡಿ ಪ್ರೋತ್ಸಾಹಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ದಿನೇಶ್ ಹೆಗ್ಡೆ ನಿವೃತ್ತ ಪ್ರಾಂಶುಪಾಲರು, ಶಾರದ ಕಾಲೇಜು ಬಸ್ರೂರು, ಡಾ. ಕೆ. ಪ್ರೇಮಾನಂದ (ತಾಲೂಕು ಆರೋಗ್ಯ ಅಧಿಕಾರಿ, ಕುಂದಾಪುರ), ಪ್ರಭಾಕರ್ ವಿ. (ಅಧ್ಯಕ್ಷರು, ಸಾಮಾಜಿಕ ನ್ಯಾಯ ಸಮಿತಿ, ಪುರಸಭೆ ಕುಂದಾಪುರ) ಉಪಸ್ಥಿತರಿದ್ದರು. ಸಂಚಾಲಕರಾಗಿ ಈರಣ್ಣ ದಶರಥ್ (ಬಾಗಲಕೋಟ), ದೇವರಾಜ್ (ಹೊಸಪೇಟೆ), ಮಂಗಳೂರು ಜಿಲ್ಲಾ ಸಂಚಾಲಕ ಸತೀಶ್ (ಮೂಡುಬಿದ್ರೆ) ಹಾಗೂ ಬಳ್ಳಾರಿ ಜಿಲ್ಲಾ ಸಂಚಾಲಕ ಹುಲಗಪ್ಪ ಕಪಗಲ್ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥಾಪಕ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ವಹಿಸಿಕೊಂಡು, “ನಾವು ಅಧಿಕಾರದ ಕೇಂದ್ರವನ್ನು ತಲುಪುವವರೆಗೂ ಬೀದಿಚಳವಳಿಯನ್ನು ನಿರಂತರವಾಗಿ ಮುಂದುವರೆಸಬೇಕು” ಎಂದು ಸಂಘಟನೆಯ ಕಾರ್ಯಕರ್ತರಿಗೆ ಕರೆ ನೀಡಿದರು.
ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು ಸ್ವಾಗತಿಸಿ, ರಾಜ್ಯ ಸಂಚಾಲಕ ದಲಿತ ಕಲಾಮಂಡಳಿ ಸಿದ್ದು ಮೇಲಿನ ಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ಸುಮಲತಾ ಬಜಗೋಳಿ ಸುಸೂತ್ರವಾಗಿ ನಿರೂಪಿಸಿ ವಂದಿಸಿದರು.




