ಹೊಸದಿಲ್ಲಿ: ಪಶ್ಚಿಮ ಏಶ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನದ ಕೂಪಕ್ಕೆ ತಳ್ಳಬಹುದು ಮತ್ತು ದೇಶದ ಆರ್ಥಿಕ ಅಭಿವೃದ್ಧಿ ಪ್ರಗತಿಗೆ ಹಿನ್ನಡೆಯನ್ನುಂಟು ಮಾಡಬಹುದು ಎಂದು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ (UNDP) ಹೊಸ ವರದಿಯು ಎಚ್ಚರಿಕೆ ನೀಡಿದೆ.
ತನ್ನ ‘ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಬಿಕ್ಕಟ್ಟು ಉಲ್ಬಣ: ಏಶ್ಯಾ ಮತ್ತು ಪೆಸಿಫಿಕ್ ನಲ್ಲಿ ಮಾನವ ಅಭಿವೃದ್ಧಿ ಪರಿಣಾಮಗಳು’ ವರದಿಯಲ್ಲಿ UNDP, ಸಂಘರ್ಷವು ಏಶ್ಯಾ ಮತ್ತು ಪೆಸಿಫಿಕ್ ನಾದ್ಯಂತ ಮಾನವ ಅಭಿವೃದ್ಧಿಗೆ ಹೆಚ್ಚಿನ ಹಿನ್ನಡೆಯನ್ನುಂಟು ಮಾಡುತ್ತಿದೆ ಎಂದು ಹೇಳಿದೆ.
ಇಂಧನ, ಸರಕು ಸಾಗಣೆ ಮತ್ತು ಕಚ್ಚಾವಸ್ತುಗಳ ವೆಚ್ಚಗಳಲ್ಲಿ ಹೆಚ್ಚಳದಿಂದಾಗಿ ಕುಟುಂಬಗಳ ಖರೀದಿ ಶಕ್ತಿ ಕಡಿಮೆಯಾಗುತ್ತಿದೆ. ಆಹಾರ ಅಭದ್ರತೆ ಹೆಚ್ಚುತ್ತಿದೆ. ಜನರ ಖರ್ಚುವೆಚ್ಚಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಜೀವನೋಪಾಯಗಳು ದುರ್ಬಲಗೊಳ್ಳುತ್ತಿವೆ ಎಂದು ವರದಿಯು ತಿಳಿಸಿದೆ.
ಮಂಗಳವಾರ ಬಿಡುಗಡೆಯಾದ ವರದಿಯ ಪ್ರಕಾರ ಜಾಗತಿಕವಾಗಿ 88 ಲಕ್ಷ ಜನರು ಬಡತನದ ಕೂಪಕ್ಕೆ ತಳ್ಳಲ್ಪಡಬಹುದು. ಪಶ್ಚಿಮ ಏಶ್ಯಾ ಸಂಘರ್ಷದ ಉಲ್ಬಣದಿಂದಾಗಿ ಏಶ್ಯಾ-ಪೆಸಿಫಿಕ್ ಪ್ರದೇಶವು 299 ಬಿಲಿಯನ್ ಡಾಲರ್ ಗಳ ನಷ್ಟವನ್ನು ಎದುರಿಸಲಿದೆ ಎಂದೂ ಎಚ್ಚರಿಕೆ ನೀಡಿದೆ.
ಸಂಘರ್ಷದ ಪರಿಣಾಮವಾಗಿ ವಿಶ್ವಾದ್ಯಂತ ಬಡತನಕ್ಕೆ ತಳ್ಳಲ್ಪಡುವವರ ಸಂಖ್ಯೆ ಸುಮಾರು 88 ಲಕ್ಷಕ್ಕೆ ಏರಲಿದ್ದು, ದಕ್ಷಿಣ ಏಶ್ಯಾದಲ್ಲಿ ಅತ್ಯಂತ ಹೆಚ್ಚು ಅಂದರೆ 80 ಲಕ್ಷಕ್ಕೂ ಅಧಿಕ ಜನರು ಬಡತನದ ಸುಳಿಯಲ್ಲಿ ಸಿಲುಕಲಿದ್ದಾರೆ.
ವರದಿಯ ಅಂದಾಜಿನಂತೆ ಸಂಘರ್ಷದ ಬಳಿಕ ಭಾರತದಲ್ಲಿ ಬಡತನದ ಪ್ರಮಾಣವು ಈಗಿನ ಶೇ.23.9ರಿಂದ ಶೇ.24.2ಕ್ಕೆ ಏರಲಿದೆ. ಇದರಿಂದ ಬಡತನದಲ್ಲಿ ಬದುಕುವವರ ಸಂಖ್ಯೆ 35,15,69,000ರಿಂದ 35,40,33,698ಕ್ಕೆ ಹೆಚ್ಚಬಹುದು ಎಂದು ವರದಿಯು ತಿಳಿಸಿದೆ.
ಭಾರತವು ತನ್ನ ತೈಲ ಅಗತ್ಯದ ಶೇ.90ಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ.40ರಷ್ಟು ಕಚ್ಚಾ ತೈಲ ಮತ್ತು ಶೇ.90ರಷ್ಟು ಎಲ್‌ಪಿಜಿ ಪಶ್ಚಿಮ ಏಶ್ಯಾದಿಂದಲೇ ಬರುತ್ತದೆ ಎಂದು ವರದಿ ಹೇಳಿದೆ.
ಭಾರತದ ಶೇ.45ಕ್ಕೂ ಅಧಿಕ ರಸಗೊಬ್ಬರ ಆಮದುಗಳನ್ನು ಪಶ್ಚಿಮ ಏಶ್ಯಾ ದೇಶಗಳು ಪೂರೈಸುತ್ತವೆ. ಶೇ.85ರಷ್ಟು ದೇಶೀಯ ಯೂರಿಯಾ ಉತ್ಪಾದನೆ ಆಮದಿತ ದ್ರವೀಕೃತ ನೈಸರ್ಗಿಕ ಅನಿಲವನ್ನು ಅವಲಂಬಿಸಿದೆ. ಇವುಗಳ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಬೆಲೆ ಏರಿಕೆ ದೇಶದ ಕೃಷಿ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರುತ್ತದೆ. ವಿಶೇಷವಾಗಿ ಜೂನ್ ನಲ್ಲಿ ಆರಂಭವಾಗುವ ಮುಂಗಾರು ಹಂಗಾಮಿನ ಮೇಲೆ ಇದು ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ವರದಿಯು ತಿಳಿಸಿದೆ.
ಈ ಸಂಘರ್ಷದಿಂದಾಗಿ ಭಾರತದ ಮಾನವ ಅಭಿವೃದ್ಧಿ ಪ್ರಗತಿಯಲ್ಲಿ 0.03ರಿಂದ 0.12 ವರ್ಷಗಳ ನಷ್ಟ ಉಂಟಾಗಬಹುದು ಎಂದು ವರದಿ ಹೇಳಿದೆ.
ಅಕ್ಟೋಬರ್ 2024ರ ಅಂಕಿಅಂಶಗಳ ಪ್ರಕಾರ ಸುಮಾರು 93.7 ಲಕ್ಷ ಭಾರತೀಯರು ಕೊಲ್ಲಿ ದೇಶಗಳಲ್ಲಿ ವಾಸವಾಗಿದ್ದಾರೆ. ಭಾರತಕ್ಕೆ ವಿದೇಶಗಳಿಂದ ಬರುವ ಹಣದಲ್ಲಿ ಸುಮಾರು ಶೇ.38ರಿಂದ ಶೇ.40ರಷ್ಟು ಈ ದೇಶಗಳಿಂದಲೇ ಬರುತ್ತದೆ. ಅಲ್ಲಿನ ಆರ್ಥಿಕ ಕುಸಿತವು ಭಾರತದಲ್ಲಿನ ಅನೇಕ ಕುಟುಂಬಗಳ ಆದಾಯಕ್ಕೆ ಹೊಡೆತ ನೀಡಲಿದೆ ಎಂದು ವರದಿಯು ತಿಳಿಸಿದೆ.
ಈ ಸಂಘರ್ಷವು ಎಂಎಸ್‌ಎಂಇ ಕ್ಷೇತ್ರವನ್ನೂ ಕಾಡಲಿದೆ.
ಹೋಟೆಲ್ ಉದ್ಯಮ, ಆಹಾರ ಸಂಸ್ಕರಣೆ, ನಿರ್ಮಾಣ ಸಾಮಗ್ರಿಗಳು, ಉಕ್ಕು ಆಧಾರಿತ ತಯಾರಿಕೆ ಹಾಗೂ ಹರಳುಗಳು ಮತ್ತು ವಜ್ರಗಳ ಉದ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂದು ವರದಿ ಹೇಳಿದೆ.
ಹೊರ್ಮುಝ್ ಜಲಸಂಧಿಯಲ್ಲಿ ಅಡಚಣೆಗಳ ಹಿನ್ನೆಲೆಯಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ವೈದ್ಯಕೀಯ ಸಾಧನಗಳ ವೆಚ್ಚ ಸುಮಾರು ಶೇ.50ರಷ್ಟು ಏರಿಕೆಯಾಗಬಹುದು. ಈಗಾಗಲೇ ಔಷಧಿಗಳ ಸಗಟು ಬೆಲೆಗಳಲ್ಲಿ ಶೇ.10ರಿಂದ ಶೇ.15ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.
