ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೂ. 1.75 ಲಕ್ಷ ವಿದ್ಯಾರ್ಥಿವೇತನ ವಿತರಣೆ

ಕಾರ್ಕಳ : ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್, ವತಿಯಿಂದ ಎಸ್ ಎಸ್ ಎಲ್ ಸಿ  ಅಂತಿಮ ಪರೀಕ್ಷೆಯಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಕಾರ್ಕಳ ಇಲ್ಲಿ ನಡೆಯಿತು ಎಸ್ ಎಸ್ ಎಲ್ ಸಿ ಯ 22 ವಿದ್ಯಾರ್ಥಿಗಳಿಗೆ ತಲಾ ರೂ. 5,000 ದಂತೆ  ವಿದ್ಯಾರ್ಥಿ ವೇತನ, ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ  5 ಐದು ಮಂದಿ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ನೀಡಿ ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಸಿದ್ಧಿವಿನಾಯಕ ಬಾಲ ಭಜನಾ ಮಂದಿರದ ವಿದ್ಯಾರ್ಥಿಗಳಿಗೆ ಸಮವಸ್ತ್ರಕ್ಕಾಗಿ ಸಹಾಯಧನವನ್ನು ನೀಡಲಾಯಿತು.




ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಡಾ. ರವಿರಾಜ್ ಶೆಟ್ಟಿ ಅವರು ಯಾವುದೇ ವಿದ್ಯಾರ್ಥಿಗಳು ಶಿಕ್ಷಣವನ್ನು ಯಾವುದೇ ಕಾರಣದಿಂದ ಅರ್ಧಕ್ಕೆ ನಿಲ್ಲಿಸಬಾರದು,ಶಿಕ್ಷಣ ವಂಚಿತರಾಗಬಾರದು. ಕಲಿಯುವ ಕಾಳಜಿ ಉಳ್ಳವರಿಗೆ  ಸಹಾಯ ಮಾಡುವ ದಾನಿಗಳು ಸಾಕಷ್ಟು ಇದ್ದಾರೆ. ಅವಕಾಶವನ್ನು  ಬಳಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು. 

ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಕಾರ್ಕಳದ ಪ್ರಸಿದ್ಧ ಹಿರಿಯ ವಕೀಲರಾದ ಶೇಖರ್ ಮಡಿವಾಳ ರವರು ಮಾತನಾಡುತ್ತಾ ಶಿಕ್ಷಣಕ್ಕಾಗಿ ನೀಡುವ ಸಹಾಯವು ಅತ್ಯಂತ ಶ್ರೇಷ್ಠವಾದದ್ದು.ತನ್ನ ಸಣ್ಣ ವಯಸ್ಸಿನಲ್ಲಿ ಇಂತಹ ಆದರ್ಶ ಸಮಾಜ ಸೇವೆ ಮಾಡುತ್ತಿರುವ ಅವಿನಾಶ್ ಶೆಟ್ಟಿಯವರು ಇತರರಿಗೆ ಮಾದರಿ ಎಂದರು. 

 ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಆನಂದ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗೋವಾದ ಉದ್ಯಮಿ ಗಣೇಶ್ ಶೆಟ್ಟಿ ಇರ್ವತ್ತೂರು, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶಾಮಲಾ ಕುಂದರ್, ಕಾರ್ಕಳ ರೋಟರಿ ಕ್ಲಬ್ಬಿನ ನಿಕಟ ಪೂರ್ವ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಸೌಮ್ಯ ಶೆಟ್ಟಿ ಕತಾರ್, ಸಮದ್ ಖಾನ್, ಪ್ರಕಾಶ್ ರಾವ್, ಪ್ರದೀಪ್ ರಾಣೆ ಉಪಸ್ಥಿತರಿದ್ದು ಶುಭ ಹಾರೈಸಿದರು.

 ಶಾಲಾ ವಿದ್ಯಾರ್ಥಿನಿಯರು  ಪ್ರಾರ್ಥಿಸಿದರು. ಟ್ರಸ್ಟಿನ ಅಧ್ಯಕ್ಷ ಅವಿನಾಶ್ ಶೆಟ್ಟಿ ಸ್ವಾಗತಿಸಿದರು.ವಸಂತ್ ಎಂ. ನಿರೂಪಿಸಿ  ವಂದಿಸಿದರು.