ರಾಮಮಂದಿರದ ಹೆಸರಿನಲ್ಲಿ 20 ಸಾವಿರ ಕೋಟಿ ರೂ.ಲೂಟಿ ನಡೆದಿದೆ: ಮಲ್ಲಿಕಾರ್ಜುನ ಖರ್ಗೆ

ಚಿಕ್ಕಬಳ್ಳಾಪುರ: ರಾಮಮಂದಿರದ ಹೆಸರಿನಲ್ಲಿ 20 ಸಾವಿರ ಕೋಟಿ ರೂಪಾಯಿ ಲೂಟಿ ನಡೆದಿದೆ ಎಂಬ ಸುದ್ದಿಗಳು ಬರುತ್ತಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ನಡೆದ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಮನ ದೇಣಿಗೆ ಕದ್ದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ, ಆರ್‌ಎಸ್‌ಎಸ್‌ (BJP – RSS) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ರಾಮಮಂದಿರದ ಹೆಸರಿನಲ್ಲಿ 20 ಸಾವಿರ ಕೋಟಿ ರೂಪಾಯಿ ಲೂಟಿ ನಡೆದಿದೆ ಎಂಬ ಸುದ್ದಿಗಳು ಬರುತ್ತಿವೆ. ಅಯೋಧ್ಯೆಯಲ್ಲಿ ನಡೆದಿರುವ ರೀತಿಯ ಘಟನೆಗಳು ಬದರಿನಾಥ, ಕೇದಾರನಾಥ ಹಾಗೂ ಅಮರನಾಥ ದೇವಾಲಯದಲ್ಲೂ ಮರುಕಳಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. 

ಅಯೋಧ್ಯೆಯಲ್ಲಿ ಬಡವರು, ದಲಿತರು ಅಥವಾ ರೈತರು ಹಣ ಲೂಟಿ ಮಾಡಿಲ್ಲ. ಪ್ರಭಾವಿ ವರ್ಗದವರು ಹಾಗೂ ಆರ್‌ಎಸ್‌ಎಸ್‌, ಬಿಜೆಪಿ ಪರವಾಗಿರುವವರು ಹಣ ಲೂಟಿ ಮಾಡಿದ್ದಾರೆ. ಪ್ರತಿದಿನ ದೇವರ ಹೆಸರು ಜಪಿಸುವವರು, ಅದೇ ದೇವರ ಹೆಸರಿನಲ್ಲಿ ಲೂಟಿ ಮಾಡುತ್ತೀರಾ? ಎಂದು ಪ್ರಶ್ನಿಸಿದರು. 

ಧರ್ಮ ಹಾಗೂ ಶ್ರೀರಾಮನ ಹೆಸರನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡು ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ದೂರಿದರು