ಇಂದಿನಿಂದ ಯುಎಇಯಲ್ಲಿ 'ಅಲ್ ಹಿಂದ್' ಮೂಲಕ ಭಾರತೀಯ ಪಾಸ್‌ಪೋರ್ಟ್-ವೀಸಾ ಸೇವೆ ಆರಂಭ: 16 ಐಸಿಎಸಿ ಕೇಂದ್ರಗಳಲ್ಲಿ ಸೇವೆ ಲಭ್ಯ: ದಿನಕ್ಕೆ ಎರಡು ಬಾರಿ ಅಪಾಯಿಂಟ್‌ಮೆಂಟ್ ಬಿಡುಗಡೆ

ಅಬುಧಾಬಿ: : ಯುಎಇಯಲ್ಲಿನ ಭಾರತೀಯ ಪಾಸ್‌ಪೋರ್ಟ್, ವೀಸಾ ಹಾಗೂ ಅಟೆಸ್ಟೇಶನ್ ಸೇವೆಗಳನ್ನು ಜುಲೈ 22ರಿಂದ ಗುತ್ತಿಗೆ ಆಧಾರದಲ್ಲಿ ಖಾಸಗಿ ಸಂಸ್ಥೆ ಅಲ್ ಹಿಂದ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಎಲ್‌ಎಲ್‌ಸಿ ಮೂಲಕ ಪುನರಾರಂಭಿಸಲಾಗುತ್ತಿದೆ ಎಂದು ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಮಂಗಳವಾರ ಪ್ರಕಟಿಸಿದೆ. 

ಈ ಸೇವೆಗಳನ್ನು ಯುಎಇಯಾದ್ಯಂತ ಕಾರ್ಯನಿರ್ವಹಿಸುವ 16 ಭಾರತೀಯ ಕಾನ್ಸುಲರ್ ಅರ್ಜಿ ಕೇಂದ್ರಗಳ ಮೂಲಕ ಒದಗಿಸಲಾಗುತ್ತದೆ. ಇದುವರೆಗೆ ತಾತ್ಕಾಲಿಕವಾಗಿ ಜಾರಿಯಲ್ಲಿದ್ದ ಅಬುಧಾಬಿ ರಾಯಭಾರ ಕಚೇರಿ ಮತ್ತು ದುಬೈ ಕಾನ್ಸುಲೇಟ್‌ನ ನೇರ ಸೇವಾ ವ್ಯವಸ್ಥೆಗೆ ಇದರಿಂದ ತೆರೆ ಬೀಳಲಿದೆ. ಜುಲೈ 22ರಿಂದ ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಹಾಗೂ ದುಬೈಯ ಭಾರತೀಯ ಕಾನ್ಸುಲೇಟ್ ಆವರಣದಲ್ಲಿ ಪಾಸ್‌ಪೋರ್ಟ್, ವೀಸಾ ಮತ್ತು ಅಟೆಸ್ಟೇಶನ್ ಸೇವೆಗಳು ಲಭ್ಯವಿರುವುದಿಲ್ಲ.

ಅರ್ಜಿದಾರರು consularsevainuae.com ವೆಬ್‌ಸೈಟ್‌ನಲ್ಲಿ ಮುಂಗಡ ಅಪಾಯಿಂಟ್‌ಮೆಂಟ್ ಕಾಯ್ದಿರಿಸಬಹುದು. ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಹಾಗೂ ರಾತ್ರಿ 9 ಗಂಟೆಗೆ ಹೊಸ ಅಪಾಯಿಂಟ್‌ಮೆಂಟ್ ಸ್ಲಾಟ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಸೇವೆ

ಎಲ್ಲ ಐಸಿಎಸಿ ಕೇಂದ್ರಗಳು ಪ್ರತಿದಿನ ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಅಪಾಯಿಂಟ್‌ಮೆಂಟ್ ಬುಕ್ ಮಾಡುವಾಗ ಸರಿಯಾದ ಸೇವಾ ವಿಭಾಗವನ್ನು ಆಯ್ಕೆ ಮಾಡಬೇಕು ಹಾಗೂ ನಿಗದಿತ ಸಮಯಕ್ಕಿಂತ 15 ನಿಮಿಷಗಳ ಮುಂಚಿತವಾಗಿ ಮಾತ್ರ ಕೇಂದ್ರಗಳಿಗೆ ಆಗಮಿಸುವಂತೆ ರಾಯಭಾರ ಕಚೇರಿ ಸೂಚಿಸಿದೆ.

ಜುಲೈ 1ರಿಂದ ಪರಿಷ್ಕೃತಗೊಂಡಿರುವ ಭಾರತ ಸರ್ಕಾರದ ಶುಲ್ಕದ ಜೊತೆಗೆ, ಸೇವಾ ಪೂರೈಕೆದಾರ ಸಂಸ್ಥೆಯಾದ ಅಲ್ ಹಿಂದ್  ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ವ್ಯಾಟ್ ಸೇರಿ AED 19 ಸೇವಾ ಶುಲ್ಕವನ್ನು ವಿಧಿಸಲಿದೆ. ಈ ಶುಲ್ಕದಲ್ಲಿ ಅರ್ಜಿ ಭರ್ತಿ, ದಾಖಲೆಗಳ ಟೈಪಿಂಗ್, ಭಾವಚಿತ್ರ, ಪ್ರಿಂಟ್‌ಔಟ್, ಫೋಟೋಕಾಪಿ ಹಾಗೂ ದೇಶೀಯ ಕೊರಿಯರ್ ಸೇವೆ ಸೇರಿವೆ.

ತತ್ಕಾಲ್ ಪಾಸ್‌ಪೋರ್ಟ್, ನವಜಾತ ಶಿಶುಗಳ ಪಾಸ್‌ಪೋರ್ಟ್ ಅರ್ಜಿ, ತುರ್ತು ಪ್ರಮಾಣಪತ್ರ (Emergency Certificate) ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಅರ್ಜಿಗಳನ್ನು ಎಲ್ಲ ಐಸಿಎಸಿ ಕೇಂದ್ರಗಳಲ್ಲಿ 'ಮೊದಲು ಬಂದವರಿಗೆ ಮೊದಲ ಆದ್ಯತೆ' ಆಧಾರದ ಮೇಲೆ ವಾಕ್-ಇನ್ ಮೂಲಕವೂ ಸ್ವೀಕರಿಸಲಾಗುತ್ತದೆ.

ಹಿನ್ನಲೆ ಏನು?

2025ರ ನವೆಂಬರ್‌ನಲ್ಲಿ ನಡೆದ ಟೆಂಡರ್ ಪ್ರಕ್ರಿಯೆಯ ಮೂಲಕ ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ, ಪಾಸ್‌ಪೋರ್ಟ್ ಮತ್ತು ಕಾನ್ಸುಲರ್ ಸೇವೆಗಳ ನಿರ್ವಹಣೆಯ ಗುತ್ತಿಗೆಯನ್ನು ಅಲ್ ಹಿಂದ್  ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ಗೆ ನೀಡಿತ್ತು. ಜುಲೈ 1ರಿಂದ ಸೇವೆ ಆರಂಭವಾಗಬೇಕಾಗಿದ್ದರೂ, ಟೆಂಡರ್ ಪ್ರಕ್ರಿಯೆಯನ್ನು ಪ್ರಶ್ನಿಸಿ ಸೋತ ಬಿಡ್ಡರ್‌ಗಳು ದೆಹಲಿ ಹೈಕೋರ್ಟ್ ಮೊರೆ ಹೋದ ಕಾರಣ ಸೇವೆ ಆರಂಭ ವಿಳಂಬವಾಯಿತು.

ಈ ಮಧ್ಯೆ, ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈಯ ಭಾರತೀಯ ಕಾನ್ಸುಲೇಟ್ ಸುಮಾರು 17 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಸ್‌ಪೋರ್ಟ್, ವೀಸಾ ಮತ್ತು ಅಟೆಸ್ಟೇಶನ್ ಸೇವೆಗಳನ್ನು ನೇರವಾಗಿ ಸಾರ್ವಜನಿಕರಿಗೆ ಒದಗಿಸುತ್ತಿದ್ದವು.

ಜುಲೈ 15ರಂದು ದೆಹಲಿ ಹೈಕೋರ್ಟ್ ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಿ, ಯುಎಇ, ಕುವೈತ್, ಸಿಂಗಾಪುರ ಹಾಗೂ ಕ್ಯಾನ್‌ಬೆರಾದ ಭಾರತೀಯ ಮಿಷನ್‌ಗಳಿಗೆ ಹೊಸ ಟೆಂಡರ್ ಆಹ್ವಾನಿಸಲು ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು. ಬಳಿಕ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಹೊಸ ಟೆಂಡರ್ ಪ್ರಕ್ರಿಯೆಯಿಂದ ವಿದೇಶಗಳಲ್ಲಿನ ಅಗತ್ಯ ಕಾನ್ಸುಲರ್ ಸೇವೆಗಳಿಗೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ವಾದಿಸಿತು.

ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಅಲ್ ಹಿಂದ್  ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ಗೆ ತಾತ್ಕಾಲಿಕವಾಗಿ ಸೇವೆ ಮುಂದುವರಿಸಲು ಅನುಮತಿ ನೀಡಿದ್ದು, ಅದರಂತೆ ಜುಲೈ 22ರಿಂದ ಯುಎಇಯಲ್ಲಿ ಸೇವೆಗಳು ಪುನರಾರಂಭವಾಗುತ್ತಿವೆ.