ಹೊಸದಿಲ್ಲಿ: ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕುರಿತ ಸಲಹಾ ಮಂಡಳಿಯ ಅಧಿಕಾರಿಗಳು ಆರೆಸ್ಸೆಸ್ ವಿರುದ್ಧ ನಿರ್ಬಂಧಗಳನ್ನು ವಿಧಿಸುವಂತೆ ಆಗ್ರಹಿಸಿದ್ದಾರೆ. ಅಮೆರಿಕಕ್ಕೆ ಭೇಟಿ ನೀಡಲಿರುವ ಆರೆಸ್ಸೆಸ್ ನಾಯಕರಿಗೆ ರಾಜತಾಂತ್ರಿಕ ಮರ್ಯಾದೆಗಳನ್ನು ನೀಡಬಾರದು ಮತ್ತು ಅವರೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸಬಾರದು ಎಂದೂ ಅವರು ಸರಕಾರವನ್ನು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
‘ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್ಮೆಂಟ್ ಆ್ಯಂಡ್ ಡೈಲಾಗ್’ ಆಗಸ್ಟ್ 29ರಂದು ನ್ಯೂಯಾರ್ಕ್ನಲ್ಲಿ ಆಯೋಜಿಸಿರುವ ‘ವಿಶ್ವ ಏಕತಾ ಉತ್ಸವ’ದಲ್ಲಿ ಭಾಗವಹಿಸಲು ಭಾಗವತ್ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆರೆಸ್ಸೆಸ್ ನ ಸದಸ್ಯರಾಗಿದ್ದಾರೆ. ಸಂಘ ಪರಿವಾರದ ಗುಂಪುಗಳು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿವೆ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತು ಅಮೆರಿಕ ಆಯೋಗದ (USCIRF) ಅಧ್ಯಕ್ಷ ಆಸಿಫ್ ಮಹಮೂದ್ ಹೇಳಿದ್ದಾರೆ.
ಆರೆಸ್ಸೆಸ್ ನಾಯಕರು ಭಾರತ ಸರಕಾರದೊಂದಿಗೆ ಗುರುತಿಸಿಕೊಂಡಿದ್ದರೂ ಅವರೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸಬಾರದು ಅಥವಾ ರಾಜತಾಂತ್ರಿಕ ಗೌರವಗಳನ್ನು ನೀಡಬಾರದು. ಬದಲಿಗೆ, ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಗೆ ಕಾರಣರಾದ ಆರೆಸ್ಸೆಸ್ ಸದಸ್ಯರ ಮೇಲೆ ನಿರ್ಬಂಧಗಳನ್ನು ವಿಧಿಸುವತ್ತ ಅಮೆರಿಕ ಸರಕಾರವು ಗಮನ ಹರಿಸಬೇಕು ಎಂದು ಆಯೋಗದ ಕಮಿಷನರ್ ಜೀನ್ ಮಿಲ್ಸ್ ಹೇಳಿದ್ದಾರೆ.
ಭಾಗವತ್ ಅವರ ಭೇಟಿಯನ್ನು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧದ ಆರೆಸ್ಸೆಸ್ ಜಾಲದ ಹಿಂಸಾಚಾರದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ‘ಏಕತೆ’ಯ ಆಚರಣೆಯು ಧಾರ್ಮಿಕ ಪ್ರಾಬಲ್ಯದ ರಾಜಕೀಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ‘ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್’ ಸಂಘಟನೆಯು ತನ್ನ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
ಮಾರ್ಚ್ನಲ್ಲಿ ಯುಎಸ್ಸಿಐಆರ್‌ಎಫ್ ನ ವಾರ್ಷಿಕ ವರದಿಯು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗಾಗಿ ಭಾರತವನ್ನು ಟೀಕಿಸಿತ್ತು. ಆರೆಸ್ಸೆಸ್ ಮತ್ತು ‘ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ನಂತಹ ವ್ಯಕ್ತಿಗಳು ಮತ್ತು ಸಂಸ್ಥೆಗಳು ಇದಕ್ಕೆ ಹೊಣೆಗಾರರಾಗಿದ್ದಾರೆ ಎಂದು ಹೇಳಿದ್ದ ಅದು,ಅವರ ವಿರುದ್ಧ ನಿರ್ಬಂಧಗಳನ್ನು ಬೆಂಬಲಿಸಿತ್ತು.
USCIRF ವರದಿಯನ್ನು ತಿರಸ್ಕರಿಸಿದ್ದ ಕೇಂದ್ರ ಸರಕಾರವು,ಭಾರತವನ್ನು ಆಯ್ದು ಟೀಕಿಸುವುದನ್ನು ಮುಂದುವರಿಸುವ ಬದಲಿಗೆ ಯುಎಸ್ಸಿಐಆರ್ಎಫ್ ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ಮತ್ತು ಹಾನಿ,ಭಾರತವನ್ನು ಗುರಿಯಾಗಿಸುವ ಮತ್ತು ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ಸದಸ್ಯರನ್ನು ಬೆದರಿಸುವಂತಹ ಕಳವಳಕಾರಿ ಘಟನೆಗಳ ಬಗ್ಗೆ ಗಮನ ಹರಿಸಬೇಕು. ಇವು ಗಂಭೀರ ಗಮನಕ್ಕೆ ಅರ್ಹವಾಗಿವೆ ಎಂದು ಹೇಳಿತ್ತು.
