ಚೆನ್ನೈ: ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಹಾಡುವ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಈ ನಿರ್ಧಾರವನ್ನು ಅವರು ‘ದೇಶವಿರೋಧಿ’ ಎಂದು ಟೀಕಿಸಿದ್ದು, ಇದು ಕಾಂಗ್ರೆಸ್‌ನ ಹಳೆಯ ತುಷ್ಟೀಕರಣ ರಾಜಕಾರಣವನ್ನು ಮತ್ತೆ ಮುನ್ನೆಲೆಗೆ ತಂದಿದೆ ಎಂದು ಆರೋಪಿಸಿದ್ದಾರೆ.
ತಮಿಳುನಾಡಿನ ಚೆಂಗಲ್ಪಟ್ಟಿನಲ್ಲಿ ಮಾತನಾಡಿದ ಅಮಿತ್ ಶಾ, 1937ರಲ್ಲಿ ಕಾಂಗ್ರೆಸ್ ವಂದೇ ಮಾತರಂ ಅನ್ನು ಎರಡು ಭಾಗಗಳಾಗಿ ವಿಭಜಿಸುವ ನಿರ್ಧಾರ ಕೈಗೊಂಡಿತ್ತು. ಮುಸ್ಲಿಮರ ತುಷ್ಟೀಕರಣಕ್ಕಾಗಿ ಕೈಗೊಂಡ ಆ ನಿರ್ಧಾರವೇ ದೇಶ ವಿಭಜನೆಗೆ ದಾರಿ ಮಾಡಿಕೊಟ್ಟಿತು ಎಂದು ಆರೋಪಿಸಿದರು. ಈಗ ಅದೇ ನಿರ್ಧಾರವನ್ನು ಕಾಂಗ್ರೆಸ್ ಮತ್ತೆ ಜಾರಿಗೆ ತರುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬುಧವಾರ ನಡೆದ ಸಭೆಯಲ್ಲಿ, 1937ರ ತನ್ನ ನಿರ್ಣಯವನ್ನು ಮುಂದುವರಿಸಲು ತೀರ್ಮಾನಿಸಿದೆ. ಅದರಂತೆ ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಸ್ಪಷ್ಟಪಡಿಸಿದೆ.
ಈ ಬೆಳವಣಿಗೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಕೂಡ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ವಂದೇ ಮಾತರಂ ಅನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸುವ ಮೂಲಕ ಕಾಂಗ್ರೆಸ್ ಈಗ ತನ್ನ ‘ಅವಮಾನ’ವನ್ನು ಅಧಿಕೃತ ನಿರ್ಣಯವನ್ನಾಗಿ ಮಾಡಿಕೊಂಡಿದೆ ಎಂದು ಟೀಕಿಸಿದ್ದಾರೆ. ವೋಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ‘ಹೊಸ ಮುಸ್ಲಿಂ ಲೀಗ್’ ಆಗಿದೆ ಎಂದೂ ಆರೋಪಿಸಿದ್ದಾರೆ.
ವಂದೇ ಮಾತರಂ ಅನ್ನು ‘ಭಾರತ ಮಾತೆಯ ಪವಿತ್ರ ಸ್ತುತಿ’ ಎಂದು ಬಣ್ಣಿಸಿರುವ ನಬಿನ್, ಈ ಗೀತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಾವಿರಾರು ಹುತಾತ್ಮರಿಗೆ ಇದು ಅವಮಾನ ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ವಂದೇ ಮಾತರಂ ಕುರಿತ ವಿವಾದವನ್ನೂ ಉಲ್ಲೇಖಿಸಿರುವ ಅವರು, ಆಗ ನಡೆದದ್ದು ‘ವ್ಯಕ್ತಿಯ ನಡವಳಿಕೆ’ ಆಗಿದ್ದರೆ, ಇದೀಗ ಅದೇ ನಿಲುವು ಕಾಂಗ್ರೆಸ್‌ನ ನೀತಿಯಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದ್ದಾರೆ.
