ರಾಜ್ಯದಲ್ಲಿ ನಕಲಿ ಔಷಧ, ಕಳಪೆ ಆಹಾರ ನಿಯಂತ್ರಣಕ್ಕೆ ಕಡಿವಾಣ ಹಾಕಲು ಮುಂದಾದ ಸರಕಾರ; ಪ್ರತಿ ತಾಲೂಕು ಮಟ್ಟದಲ್ಲಿ ‘ವಾಚ್ ಟೀಮ್’: ಯು.ಟಿ. ಖಾದರ್

ಮಂಗಳೂರು: ರಾಜ್ಯದಲ್ಲಿ ನಕಲಿ ಔಷಧಗಳ ಜಾಲ ಹಾಗೂ ಹೋಟೆಲ್‌ಗಳು, ರಸ್ತೆಬದಿ ತಿನಿಸು ಕೇಂದ್ರಗಳಲ್ಲಿ ಕಳಪೆ ಮತ್ತು ಅಸ್ವಚ್ಛ ಆಹಾರ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರತಿಯೊಂದು ತಾಲೂಕು ಮಟ್ಟದಲ್ಲೂ ನಿವೃತ್ತ ಹಿರಿಯ ನಾಗರಿಕರನ್ನು ಒಳಗೊಂಡ ವಿಶೇಷ ‘ವಾಚ್ ಟೀಮ್’ ರಚಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಹಾರ ಮತ್ತು ಔಷಧಗಳ ಗುಣಮಟ್ಟ ಕಾಪಾಡಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

60 ವರ್ಷ ಮೇಲ್ಪಟ್ಟ ನಿವೃತ್ತ ವೈದ್ಯರು, ಆಹಾರ ಮತ್ತು ಪೌಷ್ಟಿಕಾಂಶ ತಜ್ಞರು, ಪ್ರಾಧ್ಯಾಪಕರು ಹಾಗೂ ಸಾಮಾಜಿಕ ಕಾಳಜಿಯುಳ್ಳ ಹಿರಿಯ ನಾಗರಿಕರನ್ನು ಗುರುತಿಸಿ ತಾಲೂಕುವಾರು ವಾಚ್ ಟೀಮ್‌ಗಳನ್ನು ರಚಿಸುವ ಉದ್ದೇಶವಿದೆ. ಹೋಟೆಲ್, ಬೇಕರಿ ಹಾಗೂ ಔಷಧ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮತ್ತು ಸ್ವಚ್ಛತೆ ಹಾಗೂ ಗುಣಮಟ್ಟದ ಕುರಿತು ಸರ್ಕಾರ ಹಾಗೂ ಸಂಬಂಧಿತ ಇಲಾಖೆಗೆ ನೇರವಾಗಿ ವರದಿ ಸಲ್ಲಿಸುವ ಅಧಿಕಾರವನ್ನು ಈ ತಂಡಗಳಿಗೆ ನೀಡುವ ಕುರಿತು ಕಾನೂನು ಚೌಕಟ್ಟಿನಲ್ಲಿ ನಿಯಮ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಕೋಟ್ಯಂತರ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಕೆಲವೇ ನೂರು ಅಧಿಕಾರಿಗಳಿಂದ ಎಲ್ಲೆಡೆ ತಪಾಸಣೆ ನಡೆಸುವುದು ಸಾಧ್ಯವಿಲ್ಲ. ನಾಗರಿಕ ಸಮಾಜವೂ ಸರ್ಕಾರದೊಂದಿಗೆ ಕೈಜೋಡಿಸಿದಾಗ ಮಾತ್ರ ಆಹಾರ ಮತ್ತು ಔಷಧ ಕಲಬೆರಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯ ಎಂದು ಖಾದರ್ ಹೇಳಿದರು.

ಕಳಪೆ ಆಹಾರ ಹಾಗೂ ಅವಧಿ ಮೀರಿದ ಔಷಧಗಳ ಕುರಿತು ಸಾರ್ವಜನಿಕರು ತಕ್ಷಣ ದೂರು ಸಲ್ಲಿಸಲು ಹೋಟೆಲ್‌ಗಳು, ಔಷಧ ಮಳಿಗೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಗ್ರಾಹಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದೂರು ದಾಖಲಿಸಿದ ತಕ್ಷಣ ಅದು ಆಹಾರ ಸುರಕ್ಷತೆ ಅಥವಾ ಔಷಧ ನಿಯಂತ್ರಣ ಇಲಾಖೆಗೆ ನೇರವಾಗಿ ತಲುಪಲಿದೆ.

ದೂರು ಬಂದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕಾಗುತ್ತದೆ. ಕಳೆದ ಎರಡು ದಿನಗಳಲ್ಲೇ ಈ ವ್ಯವಸ್ಥೆಯ ಮೂಲಕ 400ಕ್ಕೂ ಅಧಿಕ ದೂರುಗಳು ದಾಖಲಾಗಿವೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಪತ್ತೆಯಾಗಿರುವ ಬೃಹತ್ ನಕಲಿ ಔಷಧ ಜಾಲದ ಕುರಿತು ಆತಂಕ ವ್ಯಕ್ತಪಡಿಸಿದ ಖಾದರ್, ಹಿಮಾಚಲ ಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಅನಧಿಕೃತವಾಗಿ ನಕಲಿ ಔಷಧಗಳನ್ನು ತಂದು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆಯಾಗಿದೆ ಎಂದರು.

ಐಸಿಯುಗಳಲ್ಲಿ ಬಳಸುವ ಜೀವರಕ್ಷಕ ಔಷಧಗಳೂ ಈ ಜಾಲದಲ್ಲಿ ಸೇರಿವೆ ಎನ್ನಲಾಗಿದ್ದು, ಜಾಲದ ಮೂಲವನ್ನು ಪತ್ತೆಹಚ್ಚಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪೊಲೀಸ್ ಹಾಗೂ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿದೆ. ದುಬೈನಲ್ಲಿ ಇರುವ ಕಿಂಗ್‌ಪಿನ್‌ಗಳ ಪತ್ತೆಗೂ ತನಿಖಾ ತಂಡ ಬಲೆ ಬೀಸಿದೆ ಎಂದು ಅವರು ಹೇಳಿದರು.

ಕೃತಕ ಪನೀರ್, ಮರುಬಳಕೆಯ ಎಣ್ಣೆಗೂ ಕಡಿವಾಣ

ಪಾಮ್ ಆಯಿಲ್ ಸೇರಿದಂತೆ ಇತರ ಪದಾರ್ಥಗಳನ್ನು ಬೆರೆಸಿ ತಯಾರಿಸುವ ಕೃತಕ ಪನೀರ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸ್ಟಾರ್ ಹೋಟೆಲ್‌ಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ರಸ್ತೆಬದಿ ತಿನಿಸು ಅಂಗಡಿಗಳಿಗೆ ಮಾರಾಟ ಮಾಡುವುದನ್ನು ತಡೆಯಲು ನಿಯಮ ರೂಪಿಸಲಾಗುತ್ತಿದೆ. ಬಳಕೆಯಾದ ಎಣ್ಣೆಯನ್ನು ಸಂಗ್ರಹಿಸಿ ಬಯೋಡೀಸೆಲ್ ತಯಾರಿಕೆಗೆ ಬಳಸುವ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರೋತ್ಸಾಹಿಸಲಾಗುವುದು ಎಂದರು.

ಹೋಟೆಲ್‌ಗಳಲ್ಲಿ ಮಾರಾಟ ಮಾಡುವ ಫ್ರೋಜನ್ ಚಿಕನ್, ಬನ್ ಸೇರಿದಂತೆ ಆಹಾರ ಪದಾರ್ಥಗಳನ್ನು ಎಷ್ಟು ದಿನ ಅಥವಾ ತಿಂಗಳು ಶೀತಲೀಕರಣದಲ್ಲಿ ಇಡಲಾಗಿದೆ ಎಂಬ ವಿವರವನ್ನು ಗ್ರಾಹಕರಿಗೆ ಕಾಣುವಂತೆ ಬೋರ್ಡ್‌ನಲ್ಲಿ ನಮೂದಿಸುವುದನ್ನು ಕಡ್ಡಾಯಗೊಳಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಬಳಸುವುದನ್ನು ತಡೆಯಲು ದೇಶಾದ್ಯಂತ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಜನೌಷಧಿ ಕೇಂದ್ರಗಳ ಪರಿಶೀಲನೆ

ಜನೌಷಧಿ ಕೇಂದ್ರಗಳಲ್ಲಿ ಸರ್ಕಾರಿ ಔಷಧಗಳ ಕೊರತೆ ಉಂಟಾದಾಗ ಖಾಸಗಿ ಕಂಪನಿಗಳ ಜೆನರಿಕ್ ಔಷಧಗಳನ್ನು ತಂದು ಹೆಚ್ಚಿನ ಕಮಿಷನ್‌ಗಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನೌಷಧಿ ಕೇಂದ್ರಗಳ ಔಷಧಗಳ ಗುಣಮಟ್ಟ ಹಾಗೂ ಪೂರೈಕೆ ವ್ಯವಸ್ಥೆಯ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಉರ್ದು, ಹಿಂದಿ ಶಿಕ್ಷಕರ ನೇಮಕ

ಉರ್ದು ಮತ್ತು ಹಿಂದಿ ಭಾಷಾ ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ 800 ಉರ್ದು ಹಾಗೂ 200 ಹಿಂದಿ ಶಿಕ್ಷಕರ ಹೆಚ್ಚುವರಿ ಹುದ್ದೆಗಳ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದರು.