ಡಬಲ್ ಮರ್ಡರ್‌–ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌: ₹1 ಕೋಟಿ ಜೀವನಾಂಶ ಕೇಳಿದ್ದಕ್ಕೆ ಮೂರು ಸಾವು?

ಲಕ್ನೋ: ಬ್ಯಾಂಕ್‌ವೊಂದರ ಹೊರಗೆ ಪತ್ನಿಯನ್ನು ಗುಂಡಿಕ್ಕಿ ಹತ್ಯೆಗೈದು, ಬಳಿಕ ಸಹೋದರಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿ ₹1 ಕೋಟಿ ಜೀವನಾಂಶ ಕೇಳಿದ್ದಕ್ಕೆ ಬೇಸತ್ತು ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಆ.20ರಂದು ನಡೆದ ಈ ಘಟನೆಗೆ ಸಂಬಂಧಿಸಿದಂತೆ ಮಾನಸ್ ವಾಜಪೇಯಿ (38) ಎಂಬಾತ ತನ್ನ ಪತ್ನಿ ದಿವ್ಯಾ ಮಿಶ್ರಾ ಅವರು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನ ಹೊರಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಬಳಿಕ ತನ್ನ ಸಹೋದರಿಯನ್ನು ಕೊಂದು, ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. 

12 ವರ್ಷಗಳ ಹಿಂದೆ ಮದುವೆ

ಮಾನಸ್ ಹಾಗೂ ದಿವ್ಯಾ ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಕಳೆದ ವರ್ಷ ದಿವ್ಯಾ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ₹1 ಕೋಟಿ ಜೀವನಾಂಶ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ದಂಪತಿ ನಡುವೆ ವಿವಾದ ಉಂಟಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

ವಿಚ್ಛೇದನ ದಾಖಲೆ ವಶಕ್ಕೆ

ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹತ್ಯೆ ನಡೆದ ಕೇವಲ ಎರಡು ದಿನಗಳ ಮೊದಲು ಸ್ಥಳೀಯ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣದ ವಿಚಾರಣೆ ನಡೆದಿತ್ತು. ಇದಾದ ಬಳಿಕ ಜೀವನಾಂಶದ ವಿಚಾರವಾಗಿ ದಂಪತಿ ನಡುವೆ ವಿವಾದ ಮತ್ತಷ್ಟು ತೀವ್ರಗೊಂಡಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲೇ ಜೀವನಾಂಶದ ಬೇಡಿಕೆಯಿಂದ ಬೇಸತ್ತು ಮಾನಸ್ ಈ ಕೃತ್ಯ ಎಸಗಿದ್ದಾನೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಇತರ ಆಯಾಮಗಳನ್ನೂ ತನಿಖಾ ತಂಡ ಪರಿಶೀಲಿಸುತ್ತಿದೆ.